ಮಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಕಂಡ ಶೇರು ಮಾರುಕಟ್ಟೆ ಹೂಡಿಕೆಯ ಆಕರ್ಷಕ ಜಾಹೀರಾತು ನಂಬಿ, ಅಧಿಕ ಲಾಭದ ಆಸೆಗೆ ಬಿದ್ದ ಯುವಕನೊಬ್ಬ 2,35,577 ರೂಪಾಯಿ ಕಳೆದುಕೊಂಡು ಸೈಬರ್ ವಂಚನೆಗೊಳಗಾದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಸಂತ್ರಸ್ತ ನೀಡಿದ ದೂರಿನನ್ವಯ ಮಂಗಳೂರು ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 29ರಂದು ಸಂತ್ರಸ್ತ ಯುವಕ ತನ್ನ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್ ಬಳಸುತ್ತಿದ್ದಾಗ ‘BXB MARKET (ಟ್ರೇಡಿಂಗ್)’ ಎಂಬ ಶೇರು ಮಾರುಕಟ್ಟೆಗೆ ಸಂಬಂಧಿಸಿದ ಜಾಹೀರಾತು ಪ್ರತ್ಯಕ್ಷವಾಗಿತ್ತು. ಅದನ್ನು ಕ್ಲಿಕ್ ಮಾಡಿದ ಯುವಕ, ತನ್ನ ಹೆಸರು ಮತ್ತು ಇಮೇಲ್ ಐಡಿಯನ್ನು ನಮೂದಿಸಿದ್ದ. ತಕ್ಷಣವೇ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬ, ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅತ್ಯಲ್ಪ ಅವಧಿಯಲ್ಲಿ ಭಾರಿ ಪ್ರಮಾಣದ ಲಾಭ ಗಳಿಸಬಹುದು ಎಂದು ನಂಬಿಸಿದ್ದ.
ಆತನ ಮಾತು ನಂಬಿದ ಸಂತ್ರಸ್ತ, ವಂಚಕ ಇಮೇಲ್‌ನಲ್ಲಿ ಕಳುಹಿಸಿದ ಲಿಂಕ್ ಒತ್ತಿ ವಿವರಗಳನ್ನು ರಿಜಿಸ್ಟ್ರೇಷನ್ ಮಾಡಿಕೊಂಡಿದ್ದ. ಬಳಿಕ ಅದೇ ದಿನ ತನ್ನ ಪತ್ನಿಯ ಫೋನ್‌ಪೇ ಖಾತೆಯಿಂದ 20,577 ರೂಪಾಯಿಯನ್ನು ಅಪರಿಚಿತರು ಸೂಚಿಸಿದ ಯುಪಿಐ (UPI) ಐಡಿಗೆ ವರ್ಗಾಯಿಸಿದ್ದ.
ನಂತರ ಹೆಚ್ಚಿನ ಲಾಭದ ಆಮಿಷವೊಡ್ಡಿದ ವಂಚಕರು, ಮತ್ತೆ ಹಣ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದರು. ಇದನ್ನು ನಿಜವೆಂದು ನಂಬಿದ ಯುವಕ, ಆಗಸ್ಟ್ 5ರಂದು ತನ್ನ ಸಿಎಸ್‌ಬಿ ಬ್ಯಾಂಕ್ ಖಾತೆಯಿಂದ ಆರ್‌ಟಿಜಿಎಸ್ (RTGS) ಮೂಲಕ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಗೆ 2,15,000 ರೂಪಾಯಿ ರವಾನಿಸಿದ್ದ.
ಹಣ ವರ್ಗಾವಣೆಯಾದ ಬಳಿಕ ತಾವು ಹೂಡಿಕೆ ಮಾಡಿದ ಮೊತ್ತ ಹಾಗೂ ಲಾಭದ ಹಣವನ್ನು ಹಿಂಪಡೆಯಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ವಂಚಕರಿಂದ ಯಾವುದೇ ಸೂಕ್ತ ಸ್ಪಂದನೆ ಸಿಗದಿದ್ದಾಗ ತಾನು ಮೋಸ ಹೋಗಿರುವುದು ಯುವಕನಿಗೆ ಅರಿವಾಗಿದೆ. ಜುಲೈ 29 ರಿಂದ ಆಗಸ್ಟ್ 5ರವರೆಗಿನ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 2,35,577 ರೂಪಾಯಿ ಪಡೆದು ವಂಚಿಸಲಾಗಿದೆ ಎಂದು ಸಂತ್ರಸ್ತ ದೂರಿನಲ್ಲಿ ತಿಳಿಸಿದ್ದು, ಸೈಬರ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


