ಉಡುಪಿ: ರಾಜ್ಯದ ನೂತನ ಮೀನುಗಾರಿಕೆ ಹಾಗೂ ಬಂದರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕರಾವಳಿ ಭಾಗಕ್ಕೆ ಭೇಟಿ ನೀಡಿದ ಕೆ.ಎಸ್. ಬಸವಂತಪ್ಪ ಅವರು ಇಂದು ಮಲ್ಪೆ ಬಂದರಿಗೆ ಭೇಟಿ ನೀಡಿ ವಿವಿಧ ಭಾಗಗಳನ್ನು ಪರಿಶೀಲಿಸಿದರು.
ಬಂದರಿನ ಧಕ್ಕೆಯಲ್ಲಿ ಆಳಸಮುದ್ರದಿಂದ ಬೋಟ್‌ಗಳಲ್ಲಿ ತಂದು ಇರಿಸಲಾಗಿದ್ದ ವಿವಿಧ ಜಾತಿಯ ಮೀನುಗಳನ್ನು ವೀಕ್ಷಿಸಿದ ಸಚಿವರು, ಅವುಗಳನ್ನು ಕೈಯಲ್ಲಿ ಹಿಡಿದು ಪರಿಶೀಲಿಸಿದರು. ಇದೇ ವೇಳೆ ಕರಾವಳಿಯ ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಕಾಂಗ್ರೆಸ್ ಮುಖಂಡರಿಂದ ಮಾಹಿತಿ ಪಡೆದರು.
ಬಂದರು ಹಾಗೂ ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅಗತ್ಯಗಳ ಕುರಿತು ಮೀನುಗಾರರೊಂದಿಗೆ ಸಚಿವರು ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ಪ್ರಸಾದ್ ರಾಜ್ ಕಾಂಚನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


