ಮಡಿಕೇರಿ: ಕೊಡಗು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಲಕಾವೇರಿಯಲ್ಲಿ ಈ ಬಾರಿಯ ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ದಿನಾಂಕ ಮತ್ತು ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್ 17ರ ಶುಕ್ರವಾರ ರಾತ್ರಿ 7:50ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ತೀರ್ಥೋದ್ಭವ ಜರುಗಲಿದ್ದು, ಈ ಧಾರ್ಮಿಕ ವೈಭವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮಡಿಕೇರಿ ತಾಲ್ಲೂಕಿನ ತಲಕಾವೇರಿಯಲ್ಲಿ ನಡೆಯುವ ಈ ವಾರ್ಷಿಕ ಕಾವೇರಿ ಸಂಕ್ರಮಣ ಆಚರಣೆಯಲ್ಲಿ ಭಾಗವಹಿಸಲು ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ ಮನೆಮಾಡಿದ್ದು, ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ನೆರವೇರಲಿವೆ.
ತಲಕಾವೇರಿ ತೀರ್ಥೋದ್ಭವದ ಆಚರಣೆ ಹಾಗೂ ಭಕ್ತಾದಿಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರವು 2 ಕೋಟಿ ರೂಪಾಯಿ ಅನುದಾನ ಘೋಷಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಅನುದಾನದ ಮೂಲಕ ಅಗತ್ಯ ಮೂಲಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ.


