ಬೆಳ್ತಂಗಡಿ : ತಾಲೂಕಿನ ತೆಂಕಕಾರಂದೂರು ಗ್ರಾಮದ ಕಡಿಂಗ ಎಂಬಲ್ಲಿ ಮನೆಯೊಂದರ ತೋಟದಲ್ಲಿ ಹೆಬ್ಬಾವನ್ನು ಸಂಪೂರ್ಣವಾಗಿ ನುಂಗಿದ ಸ್ಥಿತಿಯಲ್ಲಿದ್ದ 12 ಅಡಿಗೂ ಅಧಿಕ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಪ್ರಸಿದ್ಧ ಉರಗರಕ್ಷಕ ಸ್ನೇಕ್ ಅಶೋಕ್ ಅವರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಈ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಘಟನೆಯ ವಿವರ: ಕಡಿಂಗ ನಿವಾಸಿ ಹಿತೇಶ್ ಎಂಬವರ ತೋಟದಲ್ಲಿ ಶುಕ್ರವಾರ ಸಂಜೆ 4 ಗಂಟೆಯ ಸುಮಾರಿಗೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಂಡುಬಂದಿತ್ತು. ಮನೆಯವರು ಹತ್ತಿರ ತೆರಳಿ ಪರಿಶೀಲಿಸಿದಾಗ, ಅದು ಹೆಬ್ಬಾವೊಂದನ್ನು ನುಂಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಲಾಯಿಲ ಗ್ರಾಮದ ಉರಗಮಿತ್ರ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ವೇಳೆ ಹೆಬ್ಬಾವು ವಾಂತಿ: ಕರೆ ಬಂದ ತಕ್ಷಣವೇ ಸ್ನೇಕ್ ಅಶೋಕ್ ತಮ್ಮ ಸ್ನೇಹಿತ ಪ್ರತೀಕ್ ಅವರೊಂದಿಗೆ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಅಪಾಯವಾಗದಂತೆ ಎಚ್ಚರಿಕೆ ವಹಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ತೀವ್ರ ಭೀತಿ ಮತ್ತು ಒತ್ತಡಕ್ಕೆ ಒಳಗಾದ ಕಾಳಿಂಗ ಸರ್ಪವು ತಾನು ನುಂಗಿದ್ದ ಇಡೀ ಹೆಬ್ಬಾವನ್ನು ಹೊರಗೆ ವಾಂತಿ ಮಾಡಿದೆ. ಬಳಿಕ 12 ಅಡಿಗೂ ಅಧಿಕ ಉದ್ದದ ರಾಜಸರ್ಪವನ್ನು ಅತ್ಯಂತ ಜಾಗರೂಕತೆಯಿಂದ ಹಿಡಿದು ಬುಟ್ಟಿಯಲ್ಲಿ ಬಂಧಿಸಲಾಯಿತು. ತರುವಾಯ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಉಪಸ್ಥಿತಿಯಲ್ಲಿ ಅದನ್ನು ರಕ್ಷಿತಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.”ಸಂಜೆ 4 ಗಂಟೆಗೆ ಕರೆ ಬಂದ ತಕ್ಷಣ ಸ್ಥಳಕ್ಕೆ ತೆರಳಿದಾಗ 12 ಅಡಿ ಉದ್ದದ ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗಿರುವುದು ಕಂಡುಬಂತು. ಕಾರ್ಯಾಚರಣೆಯ ವೇಳೆ ಅದು ನುಂಗಿದ್ದ ಹೆಬ್ಬಾವನ್ನು ಹೊರಹಾಕಿದ್ದು, ಬಳಿಕ ಅದನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಡಲಾಗಿದೆ,” ಎಂದು ಉರಗರಕ್ಷಕ ಸ್ನೇಕ್ ಅಶೋಕ್ ತಿಳಿಸಿದ್ದಾರೆ.


