ಬೆಳ್ಳಾರೆ: ಇಲ್ಲಿನ ಸರ್ಕಾರಿ ವಿದ್ಯಾರ್ಥಿನಿ ನಿಲಯದಲ್ಲಿ ಒಣಗಲು ಹಾಕಿದ್ದ ಉಡುಪುಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬೆಳ್ಳಾರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಕೊಳ್ತಿಗೆ ನಿವಾಸಿ ಕೆ. ರಾಮಚಂದ್ರ (35) ಬಂಧಿತ ಆರೋಪಿ.
ಸೆಪ್ಟೆಂಬರ್ 2ರಂದು ಬೆಳಗಿನ ಜಾವ ಹಾಸ್ಟೆಲ್ ಕಾಂಪೌಂಡ್ಗೆ ಅಕ್ರಮವಾಗಿ ಅತಿಕ್ರಮ ಪ್ರವೇಶ ಮಾಡಿದ್ದ ಆರೋಪಿ, ಅಲ್ಲಿ ಒಣಗಲು ಹಾಕಿದ್ದ ವಿದ್ಯಾರ್ಥಿನಿಯರ ಬಟ್ಟೆಗಳನ್ನು ಕದ್ದು ಪರಾರಿಯಾಗಿದ್ದ. ಬಟ್ಟೆಗಳು ಕಾಣೆಯಾಗಿರುವ ಬಗ್ಗೆ ವಿದ್ಯಾರ್ಥಿನಿಯರು ನೀಡಿದ ದೂರಿನನ್ವಯ ವಸತಿನಿಲಯದ ಮೇಲ್ವಿಚಾರಕಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ.
ಈ ಕುರಿತು ವಾರ್ಡನ್ ಸೆಪ್ಟೆಂಬರ್ 5ರಂದು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಸೆಪ್ಟೆಂಬರ್ 7ರಂದು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ರಾಮಚಂದ್ರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆಪ್ಟೆಂಬರ್ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.


