ಸಾಮಾಜಿಕ ಜಾಲತಾಣಗಳಲ್ಲಿ ಸೌಹಾರ್ದತೆ ಕದಡುವ ಮತ್ತು ಅಶಾಂತಿ ಹರಡುವ ಪೋಸ್ಟ್‌ಗಳನ್ನು ಹಾಕುವುದರಿಂದ ಸಮಾಜದ ಪ್ರಗತಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ರಾಜ್ಯ ಹೈಕೋರ್ಟ್, ಹಿಂದುತ್ವ ಮುಖಂಡ ಶರಣ್ ಪಂಪ್‌ವೆಲ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಕಾಯ್ದಿರಿಸಿದೆ.
ರಸ್ತೆಯಲ್ಲಿ ನಮಾಝ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 24 ಗಂಟೆಗಳಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸಿದ್ದನ್ನು ಪ್ರಶ್ನಿಸಿ ಶರಣ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ವಿವಿಧ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸಿದ ಆರೋಪದಡಿ ಮಂಗಳೂರಿನ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು, ಇದನ್ನು ರದ್ದುಗೊಳಿಸುವಂತೆ ಕೋರಿ ಶರಣ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ಶರಣ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಪೊಲೀಸರ ಬಿ-ರಿಪೋರ್ಟ್ ಕ್ರಮವನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಲಾಗಿದೆಯೇ ವಿನಃ ದೂರಿನಲ್ಲಿ ಉಲ್ಲೇಖಿಸಲಾದ ಅಪರಾಧದ ಅಂಶಗಳು ಶರಣ್ ಅವರಿಗೆ ಅನ್ವಯಿಸುವುದಿಲ್ಲ ಎಂದು ವಾದಿಸಿದರು. ವಿಚಾರಣೆ ವೇಳೆ ನ್ಯಾಯಾಧೀಶರು, ಜನರು ಕಾಲಕಾಲದಿಂದ ತಮ್ಮ ಹಬ್ಬ-ಸಂಪ್ರದಾಯಗಳನ್ನು ಆಚರಿಸಿಕೊಂಡು ಬಂದಿರುವಾಗ ಈಗೇಕೆ ಒಂದು ಸಮುದಾಯದ ಆಚರಣೆಯನ್ನು ಬೊಟ್ಟು ಮಾಡಿ ತೋರಿಸುವುದು ಎಂದು ಪ್ರಶ್ನಿಸಿ, ಅರ್ಜಿದಾರರ ವಿರುದ್ಧ 20ಕ್ಕೂ ಹೆಚ್ಚು ಕೇಸ್‌ಗಳು ಏಕಿವೆ ಎಂದು ಕೇಳಿದರು. ಅಂತಿಮವಾಗಿ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿದ್ದು, ಅಲ್ಲಿಯವರೆಗೆ ಶರಣ್ ವಿರುದ್ಧದ ತನಿಖೆಗೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಮುಂದುವರಿಸಿದೆ.


