ಮಂಗಳೂರು: ಮೊಬೈಲ್ ವಿಚಾರವಾಗಿ ಉಂಟಾದ ಕ್ಷುಲ್ಲಕ ಜಗಳ ವಿಕೋಪಕ್ಕೆ ತಿರುಗಿ, ತಮ್ಮನೇ ಚಾಕುವಿನಿಂದ ಇರಿದು ಸ್ವಂತ ಅಣ್ಣನನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಬಿಜೈ ಕೊಟ್ಟಾರ ಕ್ರಾಸ್ ಬಳಿ ಭಾನುವಾರ (ಆ.30) ತಡರಾತ್ರಿ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಅಡಿವೆಪ್ಪ (40) ಕೊಲೆಯಾದ ದುರದೃಷ್ಟಕರ ವ್ಯಕ್ತಿ. ಅವರ ಕಿರಿಯ ಸಹೋದರ ರಾಜು (36) ಕೊಲೆ ಮಾಡಿದ ಆರೋಪಿ.
ಮೂಲತಃ ಬೈಲಹೊಂಗಲದವರಾದ ಈ ಕುಟುಂಬ ಕೊಟ್ಟಾರ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಮನೆಯಲ್ಲಿದ್ದ ತಾಯಿ ಸಣ್ಣ ಗೂಡಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರೆ, ಇಬ್ಬರು ಗಂಡುಮಕ್ಕಳು ಕೂಲಿ ಕೆಲಸ ಮಾಡಿಕೊಂಡಿದ್ದರು. ಮೃತ ಅಡಿವೆಪ್ಪ ಹಾಗೂ ಆರೋಪಿ ರಾಜು ಇಬ್ಬರಿಗೂ ವಿಪರೀತ ಕುಡಿತದ ಚಟವಿತ್ತು ಎನ್ನಲಾಗಿದೆ.
ಭಾನುವಾರ ರಾತ್ರಿ 10:30ರಿಂದ 11 ಗಂಟೆಯ ನಡುವಿನ ಅವಧಿಯಲ್ಲಿ ಮೊಬೈಲ್ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ಜಗಳ ಉಗ್ರರೂಪ ತಳೆದು ರಾಜು ಚಾಕುವಿನಿಂದ ಅಡಿವೆಪ್ಪ ಅವರಿಗೆ ಇರಿದಿದ್ದಾನೆ. ಈ ವೇಳೆ ಅಂಗಡಿ ಮುಚ್ಚಿ ಮನೆಗೆ ಮರಳಿದ ತಾಯಿಗೆ ದೊಡ್ಡ ಮಗ ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.
ಕೂಡಲೇ ಅವರನ್ನು ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಉರ್ವ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ರಾಜು ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


