ಮಂಗಳೂರು: ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 2013 ರಲ್ಲಿ ದಾಖಲಾಗಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಮಾರು 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ LPC ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಅ.ಕ್ರ. 135/2013ರಲ್ಲಿ ಐಪಿಸಿ ಕಲಂ 392ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಯಾಗಿದ್ದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆ ಟೆಂಪಲ್ ಸಮೀಪದ ನಿವಾಸಿ, ಸೈಯದ್ ಮುಕ್ಬಾಲ್ ಅವರ ಪುತ್ರ ಮಹಮ್ಮದ್ ತೌಸೀಫ್ (40) ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಈ ಹಿನ್ನೆಲೆಯಲ್ಲಿ 2ನೇ ಸಿಜೆಎಂ ನ್ಯಾಯಾಲಯವು ಪ್ರಕರಣವನ್ನು LPC ನಂ. 3/2026ರಂತೆ ಆದೇಶಿಸಿತ್ತು. ಬಳಿಕ ಸಿಸಿಬಿ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆಗಸ್ಟ್ 29ರಂದು ಪರಂಗಿಪೇಟೆಯಲ್ಲಿ ಮಹಮ್ಮದ್ ತೌಸೀಫ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 13ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಬಂಧಿತ ಮಹಮ್ಮದ್ ತೌಸೀಫ್, ಕುಖ್ಯಾತ ಸರಗಳ್ಳತನದ ಆರೋಪಿ ಸೈಯದ್ ಸಾಹೀಲ್ ಅವರ ಅಣ್ಣನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


