Tuesday, August 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಲಾಯಿಲ ಗ್ರಾ.ಪಂ. ವಿರುದ್ಧ ಗ್ರಾಮಸ್ಥರ ಆಕ್ರೋಶ; ಸಮಗ್ರ ಲೋಕಾಯುಕ್ತ ತನಿಖೆಗೆ ಆಗ್ರಹ

ಬೆಳ್ತಂಗಡಿ : ಲಾಯಿಲ ಗ್ರಾ.ಪಂ. ವಿರುದ್ಧ ಗ್ರಾಮಸ್ಥರ ಆಕ್ರೋಶ; ಸಮಗ್ರ ಲೋಕಾಯುಕ್ತ ತನಿಖೆಗೆ ಆಗ್ರಹ

- Advertisement -
- Advertisement -

ಬೆಳ್ತಂಗಡಿ: ವಾರ್ಡ್ ಹಾಗೂ ಗ್ರಾಮ ಸಭೆಗಳು ಕೇವಲ ಕಾಟಾಚಾರಕ್ಕೆ ಸೀಮಿತವಾಗಿವೆ. ಸಭೆಗಳಲ್ಲಿ ಗ್ರಾಮಸ್ಥರು ಮಂಡಿಸುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತಿಲ್ಲ ಎಂದು ಆರೋಪಿಸಿ ಲಾಯಿಲ ಗ್ರಾಮ ಪಂಚಾಯತ್‌ನ 1ನೇ ವಾರ್ಡಿನ ಗ್ರಾಮಸ್ಥರು ಪಂಚಾಯತ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪಡ್ಲಾಡಿ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಆ.24 ರಂದು ನಡೆದ ವಾರ್ಡ್ ಸಭೆಯಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯಿತು. ಸತೀಶ್ ನಿನ್ನಿಕಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿಂದಿನ ವಾರ್ಡ್ ಸಭೆಗಳಲ್ಲಿ ಪ್ರಸ್ತಾಪಿಸಲಾಗಿದ್ದ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು.

ನೇತಾಜಿ ಬಡಾವಣೆ ಅಕ್ರಮದ ತನಿಖೆಗೆ ಆಗ್ರಹ: ನೇತಾಜಿ ಬಡಾವಣೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಗೊಂದಲ ಹಾಗೂ ಅವ್ಯವಹಾರಗಳ ಆರೋಪಗಳು ಕೇಳಿಬರುತ್ತಿವೆ. ಅಧಿಕೃತ ವಾರಸುದಾರರಿಲ್ಲದಿರುವುದು, ಕೆಲವರು ಮನೆ ನಿರ್ಮಿಸಿ ಬಾಡಿಗೆಗೆ ನೀಡಿರುವುದು ಹಾಗೂ ನಿವೇಶನಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿರುವ ಆರೋಪಗಳ ಬಗ್ಗೆ ಹಲವು ಬಾರಿ ಚರ್ಚೆಯಾಗಿದ್ದರೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.

ಬಡವರಿಗೆ ವಸತಿ ಹಾಗೂ ನಿವೇಶನ ಒದಗಿಸುವಲ್ಲಿ ಪಂಚಾಯತ್ ವಿಫಲವಾಗಿದೆ. ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂತು.ಈ ಹಿನ್ನೆಲೆಯಲ್ಲಿ 2010ರಿಂದ 2026ರವರೆಗೆ ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ನಡೆದಿರುವ ಕಾಮಗಾರಿಗಳು, ಹಣಕಾಸು ವ್ಯವಹಾರಗಳು ಹಾಗೂ ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ಲೋಕಾಯುಕ್ತರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಬಸ್ ಸೌಲಭ್ಯಕ್ಕೆ ಒತ್ತಾಯ: ಅಗಳಿ, ಹಂದೆವೂರು, ನಿನ್ನಿಕಲ್ಲು ಸೇರಿದಂತೆ ವಿವಿಧ ಪ್ರದೇಶಗಳಿಂದ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಬೆಳ್ತಂಗಡಿ ಸೇರಿದಂತೆ ವಿವಿಧೆಡೆ ಸಂಚರಿಸುತ್ತಿದ್ದಾರೆ. ಸೂಕ್ತ ಸಾರ್ವಜನಿಕ ಸಾರಿಗೆ ಇಲ್ಲದಿರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಬೆಳಗ್ಗೆ ಹಾಗೂ ಸಂಜೆ ಬೆಳ್ತಂಗಡಿ–ಲಾಯಿಲ–ನಿನ್ನಿಕಲ್ಲು–ಚಂದ್ಕೂರು–ಕುತ್ರೊಟ್ಟು–ಉಜಿರೆ–ಧರ್ಮಸ್ಥಳ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ರಸ್ತೆ, ಬೀದಿದೀಪ, ಚರಂಡಿ ದುರಸ್ತಿಗೆ ಆಗ್ರಹ: ದರ್ಪಿಂಜದಿಂದ ನಿನ್ನಿಕಲ್ಲು, ಹಂದೆವೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೀದಿದೀಪ ಅಳವಡಿಸಬೇಕು. ಲಾಯಿಲ ಬೈಲು, ಬಜಕ್ರೆಸಾಲು ರಸ್ತೆ, ಪಡ್ಲಾಡಿ–ಕುಂಡಡ್ಕ, ಆಯಿಲ ರಸ್ತೆ ಸೇರಿದಂತೆ ವಾರ್ಡಿನ ಹಲವು ರಸ್ತೆಗಳ ದುರಸ್ತಿ, ಚರಂಡಿ ವ್ಯವಸ್ಥೆ ಹಾಗೂ ಬದಿ ಕುಸಿತದ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಹಾಲಿನ ಡಿಪೋ ಸಮೀಪದ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಿ, ಆ ಜಾಗವನ್ನು ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಲಾಯಿತು. ಈ ಬಗ್ಗೆ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದರಿಂದ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ನಾಯ್ಕ, ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ, ಸಿಬ್ಬಂದಿ ಉಷಾ ಸೂರಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಪಡ್ಲಾಡಿ ಶಾಲೆ ದುರಸ್ತಿ, ರಂಗಮಂದಿರ ನಿರ್ಮಾಣ, ನಿನ್ನಿಕಲ್ಲು ಬಳಿ ಸಾರ್ವಜನಿಕ ತಂಗುದಾಣ, ಪುದ್ದೊಟ್ಟು ಹಾಗೂ ಅಂಕಾಜೆ ಸೇರಿದಂತೆ ವಿವಿಧೆಡೆ ಅಪಾಯಕಾರಿ ಮರಗಳ ತೆರವು ಸೇರಿದಂತೆ ವಾರ್ಡಿನ ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

- Advertisement -

Latest News

error: Content is protected !!