ಕಡಬ ಪೇಟೆಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ‘ಕಿಂಗ್ಸ್ ಬಜಾರ್’ ಎಂಬ ಮನಿ ಸರ್ಕ್ಯುಲೇಷನ್ ಜಾಲವನ್ನು ಕಡಬ ಪೊಲೀಸರು ಭೇದಿಸಿದ್ದಾರೆ.
ಸಂಸ್ಥೆಯ ಮಾಲೀಕರು ಹಾಗೂ ಸ್ಥಳೀಯ ಏಜೆಂಟರು ಸೇರಿದಂತೆ ಒಟ್ಟು 8 ಜನರ ವಿರುದ್ಧ ‘ಪ್ರೈಜ್ ಚಿಟ್ಸ್ ಅಂಡ್ ಮನಿ ಸರ್ಕ್ಯುಲೇಷನ್ ಸ್ಕಿಮ್ಸ್ (ನಿಷೇಧ) ಕಾಯ್ದೆ’ಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 23, 2026 ರಂದು ಬೆಳಿಗ್ಗೆ ಕಡಬ ಪೇಟೆಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರನ್ನು ಸೇರಿಸಿ ಅಕ್ರಮ ಸಭೆ ನಡೆಸುತ್ತಿರುವ ಬಗ್ಗೆ ಕಡಬ ಠಾಣೆಯ ಗುಪ್ತಚರ ಸಿಬ್ಬಂದಿಗೆ ಮಾಹಿತಿ ಲಭಿಸಿತ್ತು. ತಕ್ಷಣ ದಾಳಿ ನಡೆಸಿದ ಪೊಲೀಸರು ಪರಿಶೀಲಿಸಿದಾಗ, ಹಾವೇರಿ ಮೂಲದ ‘ಕಿಂಗ್ಸ್ ಬಜಾರ್’ ಸಂಸ್ಥೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಬಲೆ ಬೀಸುತ್ತಿರುವುದು ಪತ್ತೆಯಾಗಿದೆ. “ಕಂಪನಿಗೆ ಹಣ ಹೂಡಿಕೆ ಮಾಡಿದರೆ ಶೀಘ್ರವಾಗಿ ಭಾರಿ ಲಾಭ ಗಳಿಸಬಹುದು, ಬೆಲೆಬಾಳುವ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು ಹಾಗೂ ಹೊಸ ಸದಸ್ಯರನ್ನು ಸೇರಿಸಿದರೆ ಪ್ರತಿದಿನ ಕಮಿಷನ್ ನೀಡಲಾಗುವುದು” ಎಂದು ಸಾರ್ವಜನಿಕರನ್ನು ನಂಬಿಸಿ ಹಣ ವಸೂಲಿ ಮಾಡಲಾಗುತ್ತಿತ್ತು.
ಆರೋಪಿಗಳ ಪಟ್ಟಿ; A1: ಮಾಲೀಕರು/ಸಂಸ್ಥೆ, ಕಿಂಗ್ಸ್ ಬಜಾರ್ (ಹಾವೇರಿ)
A2: ಸುಬ್ರಹ್ಮಣ್ಯ ಶಾಗ್ರಿತ್ತಾಯ (50), ತೋಟದ ಮೂಲೆ, ಕೊಕ್ಕಡ, ಬೆಳ್ತಂಗಡಿ
A3: ಗುರುಮೂರ್ತಿ (54), ಹಳ್ಳಿಂಗೇರಿ, ಕೊಕ್ಕಡ, ಬೆಳ್ತಂಗಡಿ
A4: ಸುರೇಶ್ ಆರ್ (55)
A5: ಬಾಲಕೃಷ್ಣ ಪಿ.ಎಚ್. (42), ಅಲಂಪಾಡಿ ಮನೆ, ಕೌಕ್ರಾಡಿ, ಕಡಬ
A6: ಕಿರಣ್ ಕುಮಾರ್ (21), ನೆಟ್ಟಣ, ಬಿಳಿನೆಲೆ, ಕಡಬ
A7: ಶ್ರೀನಾಥ್(48), ನೆಟ್ಟಣ, ಬಿಳಿನೆಲೆ, ಕಡಬ
A8: ಸಂದೇಶ್, ಪುತ್ತೂರು
ಸಾರ್ವಜನಿಕರಿಗೆ ದುರಾಸೆ ಹುಟ್ಟಿಸಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಈ ಜಾಲದ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರೈಜ್ ಚಿಟ್ಸ್ ಅಂಡ್ ಮನಿ ಸರ್ಕ್ಯುಲೇಷನ್ ಸ್ಕಿಮ್ಸ್ (ನಿಷೇಧ) ಕಾಯ್ದೆ 1978 (ಸೆಕ್ಷನ್ 4, 5, 6) ಅಡಿಯಲ್ಲಿ ಸ್ವಯಂಪ್ರೇರಿತ (Suo Moto) ಎಫ್ಐಆರ್ (ಕ್ರೈಂ ಸಂ: 100/2026) ದಾಖಲಾಗಿದೆ. ಠಾಣಾಧಿಕಾರಿ ಜಂಬುರಾಜ್ ಮಹಾಜನ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.


