Tuesday, August 25, 2026
Homeಕರಾವಳಿಉಡುಪಿಮುದರಂಗಡಿ ಡೇವಿಡ್ ಡಿಸೋಜ ಕೊಲೆ ಪ್ರಕರಣಕ್ಕೆ ತಿರುವು; ಕೊಲೆಗೆ ₹10 ಲಕ್ಷ ಸುಪಾರಿ ನೀಡಿದ ಕಿಶೋರ್...

ಮುದರಂಗಡಿ ಡೇವಿಡ್ ಡಿಸೋಜ ಕೊಲೆ ಪ್ರಕರಣಕ್ಕೆ ತಿರುವು; ಕೊಲೆಗೆ ₹10 ಲಕ್ಷ ಸುಪಾರಿ ನೀಡಿದ ಕಿಶೋರ್ ಪೂಜಾರಿ!

- Advertisement -
- Advertisement -

ಉಡುಪಿಯ ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಕಿಶೋರ್ ರಾಮ ಪೂಜಾರಿ ಸೇರಿದಂತೆ ಪ್ರಮುಖ ಜಾಲವನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಹಿಂದಿರುವ ಅಸಲಿ ಕಾರಣ ತನಿಖೆಯಿಂದ ಬಯಲಾಗಿದೆ.

ಅದಾನಿ ಯುಪಿಸಿಎಲ್ ಸಂಸ್ಥೆಯು ಎರ್ಮಾಳಿನಲ್ಲಿ ಕೈಗೆತ್ತಿಕೊಂಡಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಪೈಪ್‌ಲೈನ್ ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿಯ ಗುತ್ತಿಗೆಯನ್ನು ಪಡೆಯಲು ಉಚ್ಚಿಲ ನಿವಾಸಿ ಕಿಶೋರ್ ಪ್ರಯತ್ನಿಸಿದ್ದ. ಆದರೆ, ಈ ಲಾಭದಾಯಕ ಯೋಜನೆ ಡೇವಿಡ್ ಡಿಸೋಜ ಅವರಿಗೆ ಸಿಕ್ಕಿದ್ದರಿಂದ ಆಕ್ರೋಶಗೊಂಡ ಕಿಶೋರ್ ಪೂಜಾರಿ ಅವರನ್ನು ಹತ್ಯೆ ಮಾಡಲು ₹10 ಲಕ್ಷಕ್ಕೆ ಸುಪಾರಿ ನೀಡಿ ಸಂಚು ರೂಪಿಸಿದ್ದ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಆಗಸ್ಟ್ 7ರಂದು ನಡೆದ ಈ ಹತ್ಯೆಗೆ ಸಂಬಂಧಿಸಿ ಪೊಲೀಸರು ಆರಂಭದಲ್ಲಿ ರಾಜು, ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ಶೇಖ್ ಅವರನ್ನು ಬಂಧಿಸಿದ್ದರು. ಬಂಧಿತರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ ಮತ್ತು ಸದಾನಂದ ದೇವಾಡಿಗ ಅವರು ಹಣ ಜಮಾ ಮಾಡಿರುವುದು ಕಂಡುಬಂತು. ಇವರಿಂದ ಬಂದ ಮಾಹಿತಿಯನ್ನಾಧರಿಸಿ ಕೃತ್ಯಕ್ಕೆ ಹಣಕಾಸಿನ ನೆರವು ನೀಡಿದ ಕಿಶೋರ್ ಪೂಜಾರಿಯ ಪಾತ್ರ ಸ್ಪಷ್ಟವಾಯಿತು. ಮುಂದುವರಿದ ತನಿಖೆಯಲ್ಲಿ, ಬಿಹಾರ ಮೂಲದ ಸೂರಜ್ ಕುಮಾರ್‌ನನ್ನು ಉತ್ತರಾಖಂಡದಲ್ಲಿ ಹಾಗೂ ಶೂಟರ್‌ಗಳನ್ನು ಸರಬರಾಜು ಮಾಡಿದ್ದ ಅನೂಜ್‌ನನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಪೊಲೀಸ್ ತಂಡ ವಶಕ್ಕೆ ಪಡೆದುಕೊಂಡಿತು.

ಸುಪಾರಿ ಹಣವನ್ನು ಮೂವರು ಶೂಟರ್‌ಗಳ ಖಾತೆಗಳಿಗೆ ನೇರವಾಗಿ ಪಾವತಿಸಲಾಗಿತ್ತು. ಆರಂಭದಲ್ಲಿ ಅನೂಜ್ ಸಂಪರ್ಕಿಸಿದ್ದ ಇಬ್ಬರು ಶೂಟರ್‌ಗಳು ಹಣದ ವಿಷಯದಲ್ಲಿ ಒಪ್ಪಂದವಾಗದೆ ಕೃತ್ಯದಿಂದ ಹಿಂದೆ ಸರಿದಿದ್ದರೂ, ಅವರೂ ಸಹ ಈ ಸಂಚಿನ ಭಾಗವಾಗಿದ್ದರು. ಪ್ರಸ್ತುತ ಆ ಇಬ್ಬರು ಶೂಟರ್‌ಗಳು ಬೇರೊಂದು ಪ್ರಕರಣದಲ್ಲಿ ಗುಜರಾತ್ ಪೊಲೀಸರ ವಶದಲ್ಲಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!