ಉಡುಪಿ;ನೀಲಾವರ ಮೂಲದ ಉದಯೋನ್ಮುಖ ಸ್ಯಾಕ್ಸೋಫೋನ್ ಕಲಾವಿದೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನೀಲಾವರ ನಿವಾಸಿ ನಮೃತ ದೇವಾಡಿಗ ಮೃತಪಟ್ಟ ದುರ್ದೈವಿ. ಕಾವೇರಿ ಕರಾವಳಿಯ ಭರವಸೆಯ ಸಂಗೀತ ಸ್ಯಾಕ್ಸೋಫೋನ್ ವಾದಕಿಯಾಗಿ ಗುರುತಿಸಿಕೊಂಡಿದ್ದ ಇವರು, ಪ್ರಸ್ತುತ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು.
ನಮೃತ ಅವರು ಬೆಂಗಳೂರಿನ ತಮ್ಮ ಕೊಠಡಿಯಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಜೀವತ್ಯಾಗಕ್ಕೆ ಯತ್ನಿಸಿದ್ದರು ಎನ್ನಲಾಗಿದೆ. ಕೂಡಲೇ ಗಮನಿಸಿದ ಸ್ಥಳೀಯರು ಹಾಗೂ ಆಪ್ತರು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅವರ ಆರೋಗ್ಯ ಪರಿಸ್ಥಿತಿ ತೀವ್ರ ಗಂಭೀರವಾಗಿದ್ದರಿಂದ ಕುಟುಂಬಸ್ಥರ ಮನವಿಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಕಲಾವಿದೆಯ ದಿಢೀರ್ ನಿರ್ಗಮನಕ್ಕೆ ನಿಖರ ಕಾರಣ ಏನೆಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಉದಯೋನ್ಮುಖ ಕಲಾವಿದೆಯ ಈ ಅಕಾಲಿಕ ಸಾವು ನೀಲಾವರ ಗ್ರಾಮ ಹಾಗೂ ಜಿಲ್ಲೆಯ ಸಂಗೀತ ಕ್ಷೇತ್ರದಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.


