ಮಂಗಳೂರಿನಲ್ಲಿ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಡಿಜಿಟಲ್ ಲೋಕದಲ್ಲಿ ದಾಖಲಿಸುತ್ತಿರುವ ತುಳು ವಿಕಿಪೀಡಿಯಾ ತನ್ನ ಲೈವ್ ಆವೃತ್ತಿಯ 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ದಶಮಾನೋತ್ಸವದ ಸ್ಮರಣಾರ್ಥವಾಗಿ ಕರಾವಳಿ ವಿಕಿ ಮೀಡಿಯನ್ಸ್ ಯೂಸರ್ ಗ್ರೂಪ್ ವತಿಯಿಂದ ಸೆಪ್ಟೆಂಬರ್ 12 ಮತ್ತು 13ರಂದು ಮಂಗಳೂರಿನ ಕರಂಗಲ್ಪಾಡಿಯ ಎಜೆ ಗ್ರಾಂಡ್ ಹೊಟೇಲ್‌ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಎಂ. ಮೋಹನ್ ಆಳ್ವ, ಗಣಕತಜ್ಞ ಡಾ. ಕೆ.ಪಿ. ರಾವ್ ಹಾಗೂ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಭಾರತೀಯ ಭಾಷೆಗಳ ಪೈಕಿ 23ನೇ ವಿಕಿಪೀಡಿಯಾ ಆವೃತ್ತಿಯಾಗಿ ಸೇರ್ಪಡೆಯಾಗಿರುವ ತುಳು ವಿಕಿಪೀಡಿಯಾದಲ್ಲಿ ಪ್ರಸ್ತುತ 3,800ಕ್ಕೂ ಅಧಿಕ ಲೇಖನಗಳಿವೆ. ಆರಂಭದ ದಿನಗಳಲ್ಲಿ ಭೂತಾರಾಧನೆ, ಜನಪದ ಕಲೆ ಮತ್ತು ಸಾಂಪ್ರದಾಯಿಕ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದರೆ, ಪ್ರಸ್ತುತ ಊರುಗಳು, ವ್ಯಕ್ತಿಗಳು, ಚಲನಚಿತ್ರಗಳು, ಸಾಂಪ್ರದಾಯಿಕ ಆಹಾರ ಸಂಸ್ಕೃತಿ ಹಾಗೂ ಔಷಧೀಯ ಸಸ್ಯಗಳಂತಹ ವಿವಿಧ ವಿಷಯಗಳ ಮಾಹಿತಿಯನ್ನು ದಾಖಲಿಸಲಾಗುತ್ತಿದೆ. ಕರಾವಳಿ ವಿಕಿ ಮೀಡಿಯನ್ಸ್ ಯೂಸರ್ ಗ್ರೂಪ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪಾದನಾ ಕಾರ್ಯಾಗಾರಗಳನ್ನು ನಡೆಸಿ ಜಾಗೃತಿ ಮೂಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ (AI) ನೆರವಿನಿಂದ ವಿಶ್ವಜ್ಞಾನವನ್ನು ತುಳು ಭಾಷೆಗೆ ತರುವ ಮತ್ತು ಸ್ಥಳೀಯ ಜ್ಞಾನವನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಡಿಜಿಟಲ್ ರೂಪದಲ್ಲಿ ತಲುಪಿಸುವ ಯೋಜನೆ ಹೊಂದಿದೆ ಎಂದು ಅಧ್ಯಕ್ಷ ಡಾ. ವಿಶ್ವನಾಥ ಬದಿಕಾನ ಪ್ರೆಸ್‌ಕ್ಲಬ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


