
ಸುಬ್ರಹ್ಮಣ್ಯ: ನಾಗರ ಪಂಚಮಿ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಭಕ್ತರಿಗೆ ವಂಚಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ವೀಡಿಯೋ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೋದಲ್ಲಿ, ₹೭೫೦ ಮುಂಗಡ ಹಣ ಪಾವತಿಸಿದರೆ ದೇವಸ್ಥಾನದಲ್ಲಿ ಸೇವೆ ನೆರವೇರಿಸಿ ಪ್ರಸಾದವನ್ನು ಮನೆಗೆ ಕಳುಹಿಸಿಕೊಡಲಾಗುವುದು ಎಂದು ಪ್ರಚಾರ ಮಾಡಲಾಗಿತ್ತು. ವಿಷಯ ತಿಳಿದ ತಕ್ಷಣ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು, ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಹಿಂದೆಯೂ ದೇವಸ್ಥಾನದ ಹೆಸರು ಹಾಗೂ ಸ್ಥಳೀಯ ವಸತಿಗೃಹಗಳ ವಿವರ ಬಳಸಿ ಆನ್‌ಲೈನ್ ಕೊಠಡಿ ಬುಕ್ಕಿಂಗ್ ಹೆಸರಿನಲ್ಲಿ ಭಕ್ತರಿಗೆ ವಂಚಿಸಿದ ಘಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ, ಅಪರಿಚಿತ ಲಿಂಕ್‌ಗಳು, ಮೊಬೈಲ್ ಸಂಖ್ಯೆಗಳು ಅಥವಾ ಆನ್‌ಲೈನ್ ಜಾಹೀರಾತುಗಳನ್ನು ನಂಬಿ ಹಣ ವರ್ಗಾಯಿಸಬಾರದು ಹಾಗೂ ಯಾವುದೇ ಸೇವೆ ಅಥವಾ ಕೊಠಡಿ ಕಾಯ್ದಿರಿಸುವಿಕೆಗೆ ದೇವಸ್ಥಾನದ ಅಧಿಕೃತ ಮೂಲಗಳನ್ನೇ ಸಂಪರ್ಕಿಸಬೇಕು ಎಂದು ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.


