
ಮಂಗಳೂರು: ನಗರದಲ್ಲಿ ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಜೂನ್ 2026 ರಿಂದ ಈವರೆಗೆ ನೋ-ಪಾರ್ಕಿಂಗ್, ಫುಟ್‌ಪಾತ್ ಪಾರ್ಕಿಂಗ್ (1080 ಪ್ರಕರಣಗಳು) ಸೇರಿದಂತೆ ಅಕ್ರಮ ಪಾರ್ಕಿಂಗ್ ವಿರುದ್ಧ ಒಟ್ಟು 7,490 ಪ್ರಕರಣಗಳನ್ನು ದಾಖಲಿಸಿಕೊಂಡು ₹3,07,600 ದಂಡ ವಸೂಲಿ ಮಾಡಲಾಗಿದೆ.
ಅಲ್ಲದೆ, ನಕಲಿ ಹಾಗೂ ದೋಷಪೂರಿತ ನಂಬರ್ ಪ್ಲೇಟ್ ಬಳಸಿ ಎಸಗುವ ಅಪರಾಧಗಳನ್ನು ತಡೆಯಲು ಆಗಸ್ಟ್ 4 ರಿಂದ 12 ರವರೆಗೆ ನಡೆಸಿದ ವಿಶೇಷ ಅಭಿಯಾನದಲ್ಲಿ, ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದ 258 ಹಾಗೂ ನಂಬರ್ ಪ್ಲೇಟ್ ಇಲ್ಲದ 74 ವಾಹನಗಳು ಸೇರಿದಂತೆ ಒಟ್ಟು 332 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ₹3,01,000 ದಂಡ ವಿಧಿಸಲಾಗಿದೆ.
ವಾಹನ ಸವಾರರು ಕಡ್ಡಾಯವಾಗಿ ಸರ್ಕಾರದ ನಿಯಮಾವಳಿಯಂತೆ ‘ಹೆಚ್.ಎಸ್.ಆರ್.ಪಿ’ (HSRP) ನಂಬರ್ ಪ್ಲೇಟ್‌ಗಳನ್ನು ಅಳವಡಿಸಬೇಕು. ಮುಂದಿನ ದಿನಗಳಲ್ಲೂ ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಸಾರ್ವಜನಿಕರು ಸಂಚಾರ ನಿಯಮ ಪಾಲಿಸಿ ಸಹಕರಿಸಬೇಕಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ.


