
ಮಂಗಳೂರು: ಚಲಿಸುತ್ತಿದ್ದ ರೈಲನ್ನು ಏರಲು ಯತ್ನಿಸಿ ನಿಯಂತ್ರಣ ತಪ್ಪಿ ಬಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೇ ಸಿಬ್ಬಂದಿಯೊಬ್ಬರು ತಕ್ಷಣ ಕಾರ್ಯಪ್ರವೃತ್ತರಾಗಿ ಕಾಪಾಡಿದ ರೋಮಾಂಚಕ ಘಟನೆ ಸುರತ್ಕಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಸುರತ್ಕಲ್ ನಿಲ್ದಾಣದಿಂದ ರೈಲು ಚಲಿಸಲು ಆರಂಭಿಸಿದ ವೇಳೆ ಪ್ರಯಾಣಿಕರೊಬ್ಬರು ಓಡಿ ಬಂದು ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಆಯ ತಪ್ಪಿದ ಆತ, ಬೋಗಿ ಹಾಗೂ ಪ್ಲಾಟ್ಫಾರ್ಮ್ ನಡುವಿನ ಅಪಾಯಕಾರಿ ಅಂತರದೊಳಗೆ ಜಾರಿ ಬೀಳುವ ಹಂತ ತಲುಪಿದ್ದಾರೆ. ಆ ಕ್ಷಣದಲ್ಲೇ ಅಲ್ಲೇ ಕರ್ತವ್ಯದಲ್ಲಿದ್ದ ರೈಲ್ವೇ ಪಾಯಿಂಟ್ಸ್ಮನ್ ಸಂದೀಪ್ ನಾಯ್ಕ್ ಅವರು ಹಠಾತ್ತನೆ ಧಾವಿಸಿ ಬಂದು, ಬೀಳುತ್ತಿದ್ದ ಪ್ರಯಾಣಿಕನನ್ನು ಬಲವಾಗಿ ಹಿಡಿದು ಪ್ಲಾಟ್ಫಾರ್ಮ್ ಕಡೆಗೆ ಎಳೆದಿದ್ದಾರೆ.
ಸಂದೀಪ್ ನಾಯ್ಕ್ ಅವರ ಮಿಂಚಿನ ಸಮಯಪ್ರಜ್ಞೆ ಹಾಗೂ ಕ್ಷಣಾರ್ಧದ ನಿರ್ಧಾರದಿಂದಾಗಿ ಸಂಭವಿಸಬಹುದಾಗಿದ್ದ ಭೀಕರ ಅನಾಹುತವೊಂದು ತಪ್ಪಿದ್ದು, ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರ್ತವ್ಯನಿಷ್ಠೆ ಮೆರೆದ ಸಂದೀಪ್ ನಾಯ್ಕ್ ಅವರ ಸಾಹಸಕ್ಕೆ ಸಾರ್ವಜನಿಕರು ಹಾಗೂ ರೈಲ್ವೇ ಉನ್ನತಾಧಿಕಾರಿಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ₹10 ಸಾವಿರ ಬಹುಮಾನ ಪ್ರಕಟಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.


