Saturday, August 8, 2026
Homeಕರಾವಳಿಉಡುಪಿಉಡುಪಿ: ಉದ್ಯಮಿ ಡೇವಿಡ್ ಡಿಸೋಜ ಭೀಕರ ಕೊಲೆ ಪ್ರಕರಣ: ಮೂವರು ಆರೋಪಿಗಳ ಸೆರೆ

ಉಡುಪಿ: ಉದ್ಯಮಿ ಡೇವಿಡ್ ಡಿಸೋಜ ಭೀಕರ ಕೊಲೆ ಪ್ರಕರಣ: ಮೂವರು ಆರೋಪಿಗಳ ಸೆರೆ

- Advertisement -
- Advertisement -

ಉಡುಪಿ: ಕಾಪು ತಾಲೂಕಿನ ಮುದ್ದುರಂಗಡಿಯಲ್ಲಿ ‘ಪ್ರಿನ್ಸ್ ಎಂಟರ್‌ಪ್ರೈಸಸ್’ ಉದ್ಯಮದ ಮಾಲೀಕ ಡೇವಿಡ್ ಡಿಸೋಜಾ (55) ಅವರನ್ನು ಪಿಸ್ತೂಲಿನಿಂದ ತಲೆಗೆ ಗುಂಡಿಟ್ಟು ಭೀಕರವಾಗಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಶೂಟೌಟ್ ಸೇರಿದಂತೆ ಸಾಹಸಮಯ ರೀತಿಯಲ್ಲಿ ಮೂವರು ಅಂತರರಾಜ್ಯ ಸುಪಾರಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹಣಕಾಸಿನ ವೈಮನಸ್ಸಿನ ಹಿನ್ನೆಲೆಯಲ್ಲಿ ಅನ್ಯ ರಾಜ್ಯದ ಕಂಪನಿಯೊಂದು ನೀಡಿದ್ದ ಸುಪಾರಿಯ ಮೇರೆಗೆ ಈ ಹತ್ಯೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆಗಸ್ಟ್ 7 ರಂದು ಮಧ್ಯಾಹ್ನ 3:45 ರ ಸುಮಾರಿಗೆ ಮುದ್ದುರಂಗಡಿಯ ಸೆಂಟ್ ಕ್ಸೆವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ತಮ್ಮ ಕಚೇರಿಯಿಂದ ಹೊರಬಂದು, ಕಾರಿನ ಬಾಗಿಲು ತೆಗೆಯುತ್ತಿದ್ದ ಡೇವಿಡ್ ಡಿಸೋಜಾ ಅವರ ಬಳಿಗೆ ಬೈಕಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ (ಅಪರಾಧ ಕ್ರಮಾಂಕ: 66/2026, BNS ಕಲಂ 103, 3(5) ಮತ್ತು ಶಸ್ತ್ರಾಸ್ತ್ರ ಕಾಯ್ದೆ) ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ಕೃತ್ಯವೆಸಗಿದ ಮೂವರು ಆರೋಪಿಗಳು ಬಸ್ಸಿನಲ್ಲಿ ಭಟ್ಕಳದ ಕಡೆಗೆ ಪರಾರಿಯಾಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ಬೈಂದೂರಿನ ಒತ್ತಿನೆಣೆ ಎಂಬಲ್ಲಿ ಬಸ್ಸನ್ನು ತಡೆದು ಪರಿಶೀಲನೆ ನಡೆಸಿತು. ಈ ವೇಳೆ ಪೊಲೀಸರನ್ನು ಕಂಡು ಬಸ್ಸಿನಿಂದ ಇಳಿದು ಓಡಲು ಯತ್ನಿಸಿದ ಆರೋಪಿಗಳನ್ನು ಬೆನ್ನಟ್ಟಿದಾಗ, ಉತ್ತರ ಪ್ರದೇಶದ ಥಾಣಾ ಪಿಲ್ವ ಮೂಲದ ರಾಜು (42) ಎಂಬಾತ ಕಾಪು ಪಿಎಸ್‌ಐ ತೇಜಸ್ವಿ ಅವರನ್ನು ದೂಡಿ ಹಾಕಿ, ತನ್ನಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಈ ಸಂದರ್ಭದಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹೊಡೆದು ಸೆರೆಹಿಡಿದಿದ್ದಾರೆ. ಈತನೇ ಡೇವಿಡ್ ಅವರಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದ ಪ್ರಮುಖ ಆರೋಪಿಯಾಗಿದ್ದಾನೆ. ಪೊಲೀಸರ ಮೇಲೆ ದಾಳಿ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಇನ್ನಿಬ್ಬರು ಆರೋಪಿಗಳಾದ ಉತ್ತರಾಖಂಡ ಮೂಲದ ಅಜಯ್ ರಸ್ತೋಗಿ ಅಲಿಯಾಸ್ ಅನ್ಮೋಲ್ (23) ಎಂಬಾತನನ್ನು ಕುಮಟಾ ಪೊಲೀಸರ ಸಹಕಾರದಿಂದ ಕುಮಟಾದಲ್ಲಿ ಹಾಗೂ ಬಿಹಾರ ಮೂಲದ ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38) ಎಂಬಾತನನ್ನು ಭಟ್ಕಳ ಪೊಲೀಸರ ನೆರವಿನಿಂದ ಭಟ್ಕಳದಲ್ಲಿ ಇಂದು (ಆಗಸ್ಟ್ 8) ಮುಂಜಾನೆ ವಶಕ್ಕೆ ಪಡೆಯಲಾಗಿದೆ.ಆರೋಪಿಯ ದಾಳಿಯಿಂದ ಗಾಯಗೊಂಡ ಕಾಪು ಪಿಎಸ್‌ಐ ತೇಜಸ್ವಿ ಹಾಗೂ ಕಾಲಿಗೆ ಗುಂಡೇಟು ತಿಂದ ಆರೋಪಿ ರಾಜು ಪ್ರಸ್ತುತ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿ ಎರ್ಮಾಳಿನಲ್ಲಿ ಬಿಟ್ಟು ಹೋಗಿದ್ದ ಮೋಟಾರು ಸೈಕಲ್ ಹಾಗೂ ಪಿಸ್ತೂಲನ್ನು పోలీసులు ಸ್ವಾಧೀನಪಡಿಸಿಕೊಂಡಿದ್ದಾರೆ.

ಮೃತ ಡೇವಿಡ್ ಡಿಸೋಜಾ ಅವರು ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಕಂಪನಿಯೊಂದರ ಜೊತೆ ಹಣಕಾಸಿನ ವಿಚಾರದಲ್ಲಿ ತೀವ್ರ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಸುಪಾರಿ ನೀಡಿ ಕೊಲೆ ಮಾಡಿಸಲಾಗಿದೆ ಎಂಬುದು ತಿಳಿದುಬಂದಿದೆ. ಪ್ರಕರಣದಲ್ಲಿ ಸುಪಾರಿ ನೀಡಿದವರು, ಹಣಕಾಸಿನ ನೆರವು ನೀಡಿದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರ ಪತ್ತೆಗೆ ಜಾಲ ಬೀಸಲಾಗಿದೆ.

ಪೊಲೀಸ್ ತಂಡದ ಭರ್ಜರಿ ಕಾರ್ಯಾಚರಣೆ:

ಉಡುಪಿ ಜಿಲ್ಲಾ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ, ಕಾಪು ವೃತ್ತ ನಿರೀಕ್ಷಕ ಅಝ್‌ಮತ್ ಆಲಿ ಜಿ, ಡಿಎಸ್‌ಬಿ ಪಿಐ ಹರೀಶ್, ಬೈಂದೂರು ಸಿಐ ಶಿವಕುಮಾರ್, ಕುಂದಾಪುರ ಸಿಐ ಸಂತೋಷ್ ಕಾಯ್ಕಿಣಿ, ಪಿಎಸ್‌ಐಗಳಾದ ಮಹೇಶ್, ತೇಜಸ್ವಿ, ಮಂಜುನಾಥ ಮರಬದ, ವಿನಯ್, ಪ್ರಸನ್ನ ಎಂ.ಎಸ್, ಶಕ್ತಿವೇಲು, ಅನಿಲ್, ಲೋಹಿತ್ ಕುಮಾರ್, ಪ್ರೊಬೆಷನರಿ ಪಿಎಸ್‌ಐ ಶಿಫಾಝ್, ಭಟ್ಕಳ ಮತ್ತು ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿ, ಬೆರಳಚ್ಚು, ಶ್ವಾನದಳ ಹಾಗೂ ಸಿಡಿಆರ್ ಸೆಲ್ ತಂಡದ ಜಂಟಿ ಕಾರ್ಯಾಚರಣೆಯಲ್ಲಿ ಈ ಪ್ರಕರಣ ಅತ್ಯಂತ ವೇಗವಾಗಿ ಭೇದಿಸಲ್ಪಟ್ಟಿದೆ.

- Advertisement -

Latest News

error: Content is protected !!