Friday, August 7, 2026
Homeಅಪರಾಧಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಇಬ್ಬರು ಆರೋಪಿಗಳ ಅರ್ಜಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಇಬ್ಬರು ಆರೋಪಿಗಳ ಅರ್ಜಿ

- Advertisement -
- Advertisement -

ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಪ್ರಮುಖ ತಿರುವು ಸಿಕ್ಕಿದ್ದು, ಪ್ರಕರಣದ 10ನೇ ಆರೋಪಿ ವಿನಯ್ ಹಾಗೂ 14ನೇ ಆರೋಪಿ ಪ್ರದೋಷ್ ತಮ್ಮನ್ನು ‘ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ಅರ್ಜಿಯಲ್ಲಿ ಪ್ರದೋಷ್, ದರ್ಶನ್ ಜೊತೆಗಿನ ತಮ್ಮ ಹಳೆಯ ಸ್ನೇಹವನ್ನು ಉಲ್ಲೇಖಿಸುತ್ತಾ, ಘಟನೆಯ ದಿನ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ವಹಿಸಿದ ಪಾತ್ರ ಹಾಗೂ ರೇಣುಕಾಸ್ವಾಮಿ ಮೇಲೆ ಮೆರೆದ ಕ್ರೌರ್ಯವನ್ನು ಸುದೀರ್ಘವಾಗಿ ವಿವರಿಸಿದ್ದಾರೆ.

ರೇಣುಕಾಸ್ವಾಮಿ ಮೇಲಿನ ಹಲ್ಲೆಯನ್ನು ತಡೆಯಲು ತಾವು ಪ್ರಯತ್ನಿಸಿದರೂ ದರ್ಶನ್ ಕೇಳಲಿಲ್ಲವೆಂದು, ಕೊಲೆಯ ನಂತರ ಸಹಾಯ ಮಾಡದಿದ್ದರೆ ಗನ್‌ನಿಂದ ಸುಟ್ಟು ಹಾಕುವುದಾಗಿ ದರ್ಶನ್ ಜೀವ ಬೆದರಿಕೆ ಹಾಕಿದ್ದರಿಂದ ಅನಿವಾರ್ಯವಾಗಿ ಸಹಾಯ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ. ತಾವು ಯಾವುದೇ ಅಪರಾಧ ಕೃತ್ಯ ಎಸಗಿಲ್ಲ, ಕೇವಲ ಸಂದೇಶಗಳನ್ನು ಓದಿದ್ದಷ್ಟೇ ಎಂದು ಸ್ಪಷ್ಟಪಡಿಸಿರುವ ಪ್ರದೋಷ್, ತಮಗೆ ಕ್ಷಮೆ ನೀಡಿ ಪ್ರಾಸಿಕ್ಯೂಷನ್ ಪರ ಸಾಕ್ಷ್ಯ ನುಡಿಯಲು ಅವಕಾಶ ಮಾಡಿಕೊಡಬೇಕೆಂದು ಕೋರಿದ್ದಾರೆ.

ಈ ಬೆಳವಣಿಗೆಗೆ ವಿಶೇಷ ಸರಕಾರಿ ಅಭಿಯೋಜಕ (SPP) ಪಿ.ಪ್ರಸನ್ನ ಕುಮಾರ್ ಲಿಖಿತ ಸಮ್ಮತಿ ನೀಡಿದ್ದು, ಪ್ರದೋಷ್ ಪ್ರಾಸಿಕ್ಯೂಷನ್‌ಗೆ ಬೆಂಬಲ ನೀಡುವುದರಿಂದ ಈ ಅರ್ಜಿಯ ಕುರಿತು ಇತರ ಆರೋಪಿಗಳ ವಾದ ಆಲಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮತ್ತೊಂದೆಡೆ, ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲಕ ವಿನಯ್ ಸಲ್ಲಿಸಿರುವ ಅರ್ಜಿಯಲ್ಲಿ ಸೂಕ್ತ ವಿವರಗಳಿಲ್ಲದ ಕಾರಣ ಅದನ್ನು ಬಾಕಿ ಇರಿಸಲು ಪ್ರಾಸಿಕ್ಯೂಷನ್ ಕೋರಿದೆ. ಇದೇ ವೇಳೆ ದರ್ಶನ್ ಹಾಗೂ ಇತರ ಆರೋಪಿಗಳು ಈ ಅರ್ಜಿಯನ್ನು ಪುರಸ್ಕರಿಸಬಾರದು ಮತ್ತು ತಮ್ಮ ವಾದ ಮಂಡನೆಗೆ ಅವಕಾಶ ನೀಡಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ. ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯವು, ಮಾಫಿ ಸಾಕ್ಷಿ ಅರ್ಜಿಯ ಕುರಿತು ಇತರ ಆರೋಪಿಗಳ ವಾದ ಆಲಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಆಗಸ್ಟ್ 10 ರಂದು ತನ್ನ ಆದೇಶವನ್ನು ಪ್ರಕಟಿಸುವುದಾಗಿ ತಿಳಿಸಿದೆ.

- Advertisement -

Latest News

error: Content is protected !!