
ತಿರುಪತಿ ತಿರುಮಲ ದೇವಾಲಯದ ಲಡ್ಡು ಪ್ರಸಾದದ ತುಪ್ಪ ಕಲಬೆರಕೆ ಪ್ರಕರಣದ ಬೆನ್ನಲ್ಲೇ, ಈಗ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲೂ ತುಪ್ಪ ಪೂರೈಕೆಯಲ್ಲಿ ಭಾರಿ ಅಕ್ರಮ ಹಾಗೂ ಕಲಬೆರಕೆಯ ಆರೋಪ ಕೇಳಿಬಂದಿದೆ.
2025-26ರ ಮಂಡಲ-ಮಕರವಿಳಕ್ಕು ಪೂಜಾ ಋತುವಿನಲ್ಲಿ ಕೇರಳ ಸರ್ಕಾರದ ಸಹಕಾರಿ ಹಾಲು ಒಕ್ಕೂಟ ‘ಮಿಲ್ಮಾ’ ಮೂಲಕ ದೇಗುಲಕ್ಕೆ ತುಪ್ಪ ಸರಬರಾಜು ಮಾಡಲಾಗಿತ್ತು. ಆದರೆ ತಮಿಳುನಾಡಿನ ಸಂಸ್ಥೆಯೊಂದು ಪ್ರತಿ ಕೆಜಿಗೆ 375 ರೂ. ನಂತೆ ಪೂರೈಸಲು ಪ್ರಸ್ತಾವನೆ ಸಲ್ಲಿಸಿದ್ದರೂ, ದೇವಸ್ವಂ ಮಂಡಳಿಯು ಅದನ್ನು ತಿರಸ್ಕರಿಸಿ ಮಿಲ್ಮಾದಿಂದ ಪ್ರತಿ ಕೆಜಿಗೆ 515 ರೂ. ನಂತೆ ಖರೀದಿ ಮಾಡಿದ್ದರಿಂದ ಸುಮಾರು 3 ಕೋಟಿ ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ಇದಷ್ಟೇ ಅಲ್ಲದೆ, ಮಿಲ್ಮಾದಿಂದ ರವಾನೆಯಾದ ಶುದ್ಧ ತುಪ್ಪವನ್ನು ಶಬರಿಮಲೆ ತಲುಪುವ ಮಾರ್ಗಮಧ್ಯದಲ್ಲೇ ನಕಲಿ ಅಥವಾ ಕಲಬೆರಕೆ ತುಪ್ಪದೊಂದಿಗೆ ಬದಲಾಯಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ವರದಿಗಳನ್ನಾಧರಿಸಿ ಕೇರಳ ಹೈಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಪ್ರಕರಣದ ಸತ್ಯಾಸತ್ಯತೆ ಹೊರತರಲು ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ವಿಚಕ್ಷಣಾ ಪಡೆಯಿಂದ (Vigilance Wing) ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿದೆ. ಮತ್ತೊಂದೆಡೆ, ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಮಿಲ್ಮಾ ಸಂಸ್ಥೆಯು, ತಾನು ಪೂರೈಸಿದ ತುಪ್ಪದಲ್ಲಿ ಯಾವುದೇ ದೋಷವಿಲ್ಲ ಮತ್ತು ಅದು ಸಂಪೂರ್ಣ ಶುದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.


