
ಮಂಗಳೂರು: ಲಕ್ಷ್ಮಣ್ ಸವದಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಿದ ಬೆನ್ನಲ್ಲೇ, ಅವರ ಪುತ್ರ ಶಶಿಕಾಂತ್ ಸವದಿ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಉಡುಪಿಯಲ್ಲಿ ಉದ್ಯಮದ ಕೆಲಸದಲ್ಲಿದ್ದ ಶಶಿಕಾಂತ್ ಸವದಿ, ತಂದೆಗೆ ಸಚಿವ ಸ್ಥಾನ ಒಲಿದ ಸುದ್ದಿ ತಿಳಿಯುತ್ತಿದ್ದಂತೆಯೇ ಮಂಗಳೂರಿನ ಕಟೀಲು ಕ್ಷೇತ್ರಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದರು.
ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿಕಾಂತ್ ಸವದಿ, “ನಮ್ಮ ಕುಟುಂಬ ಕಟೀಲು ದುರ್ಗಾಪರಮೇಶ್ವರಿಯನ್ನು ಆರಾಧಿಸಿಕೊಂಡು ಬಂದಿದೆ. ಅಮ್ಮನವರ ಆಶೀರ್ವಾದ ಹಾಗೂ ತಂದೆಯವರ ಸುದೀರ್ಘ ಶ್ರಮಕ್ಕೆ ಈ ಫಲ ಸಿಕ್ಕಿದೆ. ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇತ್ತು, ನಿನ್ನೆ ರಾತ್ರಿ ಶುಭ ಸುದ್ದಿ ತಿಳಿಯಿತು,” ಎಂದು ಸಂತಸ ಹಂಚಿಕೊಂಡರು.
ಇದೇ ವೇಳೆ, ಕೊನೆ ಕ್ಷಣದವರೆಗೂ ಸಾಕಷ್ಟು ಕುತೂಹಲ ಮೂಡಿಸಿದ್ದ ಸಂಪುಟ ವಿಸ್ತರಣೆಯ ಪಟ್ಟಿ ಮೂರು ಬಾರಿ ಬದಲಾವಣೆಯಾಗಿತ್ತು ಎಂಬ ವರದಿಗಳ ನಡುವೆಯೇ ಸವದಿ ಅವರಿಗೆ ಸಚಿವ ಸ್ಥಾನ ಖಾತರಿಯಾಗಿದೆ. ಇನ್ನೊಂದೆಡೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕ ಯಶವಂತರಾಯ ಗೌಡ ಪಾಟೀಲ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು, ಎಸ್ಎಸ್ ಮಲ್ಲಿಕಾರ್ಜುನ್ ಅವರು ತಾವು ರಾಜೀನಾಮೆ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


