
ಬೆಳ್ತಂಗಡಿ : ತಾಲೂಕಿನಾದ್ಯಂತ ಕಳೆದ 48 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಸಾರ್ವಜನಿಕರ ಜನಜೀವನ, ರಸ್ತೆ ಸಂಪರ್ಕ, ಸರ್ಕಾರಿ ಮೂಲಸೌಕರ್ಯ ಹಾಗೂ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ, ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಆ. 3ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಯಿತು.
ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯ ಸಮಗ್ರ ಪರಿಶೀಲನೆ ನಡೆಸಿ, ಮುನ್ನೆಚ್ಚರಿಕೆ ಕ್ರಮಗಳು, ರಕ್ಷಣಾ ಕಾರ್ಯಾಚರಣೆ, ಪರಿಹಾರ ವ್ಯವಸ್ಥೆ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಕುರಿತು ಚರ್ಚಿಸಿ ಅಗತ್ಯ ನಿರ್ದೇಶನಗಳನ್ನು ಅಧಿಕಾರಿಗಳಿಗೆ ಶಾಸಕರು ನೀಡಿದರು.
ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ತಹಶೀಲ್ದಾರ್ ಎಸ್. ಎನ್. ನರಗುಂದ, ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ. ಎಸ್. ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಶೌರ್ಯ ವಿಪತ್ತು ನಿರ್ವಹಣಾ ತಂಡ ಸೇರಿದಂತೆ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲ ತಂಡಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಭಾರೀ ಮಳೆಯ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಸಮನ್ವಯ ಮತ್ತು ತ್ವರಿತ ಕ್ರಮಗಳ ಕುರಿತು ಮಹತ್ವದ ಚರ್ಚೆಯನ್ನು ಶಾಸಕರು ಅಧಿಕಾರಿಗಳೊಂದಿಗೆ ನಡೆಸಿದರು.


