Wednesday, November 4, 2026
Homeಕರಾವಳಿಮಂಗಳೂರುಬಂಟ್ವಾಳ; ಕೆಲಿಂಜ ಶಾಲೆಯ ಮುಖ್ಯ ಶಿಕ್ಷಕಿ ವನಿತಾ ಶೆಟ್ಟಿಗಾರ್ ಹೃದಯಾಘಾತದಿಂದ ನಿಧನ

ಬಂಟ್ವಾಳ; ಕೆಲಿಂಜ ಶಾಲೆಯ ಮುಖ್ಯ ಶಿಕ್ಷಕಿ ವನಿತಾ ಶೆಟ್ಟಿಗಾರ್ ಹೃದಯಾಘಾತದಿಂದ ನಿಧನ

- Advertisement -
- Advertisement -

ಬಂಟ್ವಾಳ (ನ.04): ಕೆಲಿಂಜ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವನಿತಾ ಶೆಟ್ಟಿಗಾರ್ (58) ಅವರು ನವೆಂಬರ್ 2ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶಾಲೆಯಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದ ವನಿತಾ ಅವರಿಗೆ ರಾತ್ರಿ ವೇಳೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

34 ವರ್ಷಗಳ ಸುದೀರ್ಘ ಸೇವೆ: ಶಿಕ್ಷಣ ಕ್ಷೇತ್ರದಲ್ಲಿ ಬರೋಬ್ಬರಿ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ವನಿತಾ ಶೆಟ್ಟಿಗಾರ್ ಅವರು ವೇಣೂರು ಪಡಂತಡ್ಕ, ಕುಪ್ಪೆಪದವು, ಮೂಡುಬಿದಿರೆ ಜ್ಯೋತಿನಗರ ಹಾಗೂ ಕೊಳವೂರು ಶಾಲೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಭಡ್ತಿ ಪಡೆದು ಮುಖ್ಯ ಶಿಕ್ಷಕಿಯಾಗಿ ಎರ್ಮಾಳುಪದವು ಶಾಲೆಗೆ ವರ್ಗಾವಣೆಗೊಂಡಿದ್ದರು. ಕಳೆದ ವರ್ಷವಷ್ಟೇ ಕೆಲಿಂಜ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಅಪಾರ ಕರ್ತವ್ಯ ಪ್ರಜ್ಞೆ ಹೊಂದಿದ್ದ ವನಿತಾ ಅವರು ಶಾಲೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಅವರು, ನವೆಂಬರ್ 7ರಂದು ಶಾಲೆಯಲ್ಲಿ ನಡೆಯಲಿದ್ದ ‘ಪ್ರತಿಭಾ ಕಾರಂಜಿ’ ಕಾರ್ಯಕ್ರಮದ ಯಶಸ್ಸಿಗಾಗಿ ಶಾಲಾಭಿವೃದ್ಧಿ ಸಮಿತಿಯೊಂದಿಗೆ ನಿರಂತರ ಸಮಾಲೋಚನೆ ನಡೆಸಿ ಯೋಜನೆಗಳನ್ನು ರೂಪಿಸಿದ್ದರು. ಆದರೆ ಕಾರ್ಯಕ್ರಮಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿರುವುದು ಎಲ್ಲರನ್ನೂ ತೀವ್ರ ಶೋಕಕ್ಕೀಡುಮಾಡಿದೆ.

ಮೃತರು ಇಬ್ಬರು ಪುತ್ರಿಯರು, ಬಂಧುಮಿತ್ರರು ಹಾಗೂ ಅಪಾರ ವಿದ್ಯಾರ್ಥಿ ಬಳಗವನ್ನು ಅಗಲಿದ್ದಾರೆ. 34 ವರ್ಷಗಳ ಕಾಲ ಅಪಾರ ಕೊಡುಗೆ ನೀಡಿದ ದಕ್ಷ ಶಿಕ್ಷಕಿಯ ಅಕಾಲಿಕ ನಿಧನಕ್ಕೆ ಸಹೋದ್ಯೋಗಿಗಳು, ಹಳೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

- Advertisement -

Latest News

error: Content is protected !!