
ಬಂಟ್ವಾಳ ; ಹಿಂದಿನ ಮತ್ತು ಇಂದಿನ ಆಹಾರ ಪದ್ಧತಿಯಲ್ಲಿ ಬಹಳಷ್ಟು ವ್ಯತ್ಯಾಸಗಳಿದ್ದು ಈಗಿನ ಆಹಾರಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ, ಕೊಡಾಜೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಣಿ ಒಕ್ಕೂಟದ ವತಿಯಿಂದ ಮಾಣಿ ಕರ್ನಾಟಕ ಪ್ರೌಢ ಶಾಲೆಯ ಸಭಾಂಗಣದಲ್ಲಿ ಜರುಗಿದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಪ್ರಕೃತಿಯಿಂದ ಸಿಗುವ ಆಹಾರದಲ್ಲಿ ಔಷದೀಯ ಗುಣಗಳಿದ್ದು, ಅದು ಮನುಷ್ಯನ ಆರೋಗ್ಯವನ್ನು ಕಾಪಾಡುತ್ತದೆ. ಈ ಬಗ್ಗೆ ಮಕ್ಕಳಿಗೆ ತಿಳಿಯಪಡಿಸುವುದರ ಜೊತೆಗೆ ಮಕ್ಕಳು ಸೇವಿಸುವ ಆಹಾರದ ಬಗ್ಗೆ ಗಮನಿಸುವ ಮತ್ತು ಜಾಗೃತಿ ವಹಿಸುವ ಅಗತ್ಯ ಇದೆ ಎಂದು ಅವರು ಹೇಳಿದರು.
ಒಕ್ಕೂಟದ ಅಧ್ಯಕ್ಷ ಮಂಜಪ್ಪ ನಾಯ್ಕ್ ರವರು ಅಧ್ಯಕ್ಷತೆ ವಹಿಸಿದ್ದರು. ಮಾಣಿ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆಯವರು ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್, ಮಾಣಿ ಕರ್ನಾಟಕ ಪ್ರೌಢ ಶಾಲೆಯ ಸಂಚಾಲಕ ಇಬ್ರಾಹಿಂ.ಕೆ.ಮಾಣಿ, ಮುಖ್ಯೋಪಾಧ್ಯಾಯರಾದ ಚೆನ್ನಪ್ಪ ಗೌಡ, ಯೋಜನೆಯ ಮೇಲ್ವಿಚಾರಕಿ ಆಶಾ ಪಾರ್ವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಪ್ರೇಮ.ಕೆ ಸ್ವಾಗತಿಸಿದರು. ಸುಜಾತ ವಂದಿಸಿದರು. ಸೇವಾ ಪ್ರತಿನಿಧಿ ಲೈಲಾಬಿ ಕಾರ್ಯಕ್ರಮ ನಿರೂಪಿಸಿದರು. ವನಿತಾ ಮತ್ತು ಪ್ರಭಾ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ತುಳು ಗೀತೆ, ಪಾಡ್ದನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಕ್ಕೂಟದ ಸದಸ್ಯರು ನಡೆಸಿಕೊಟ್ಟರು. ಆಟಿ ತಿಂಗಳ ವಿಶೇಷ ಖಾದ್ಯಗಳೊಂದಿಗೆ ಭೋಜನ ನಡೆಯಿತು.


