
ಮಹಾರಾಷ್ಟ್ರ: ಭಿವಂಡಿಯ ಪವರ್‌ಲೂಮ್ ನಗರದ ಬಾಲಾಜಿ ನಗರದಲ್ಲಿರುವ ‘ಕೊಹಿನೂರ್’ ಎಂಬ ನಾಲ್ಕು ಮಹಡಿಯ ಕಟ್ಟಡದ ಒಂದು ಭಾಗ ಕುಸಿದು ಬಿದ್ದು ಆರು ಜನರು ಮೃತಪಟ್ಟಿರುವ ದಾರುಣ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.
ಒಟ್ಟು 48 ಕೊಠಡಿಗಳನ್ನು ಹೊಂದಿದ್ದ ಈ ಕಟ್ಟಡವನ್ನು ಮಹಾನಗರ ಪಾಲಿಕೆಯು ಈಗಾಗಲೇ ಅಪಾಯಕಾರಿ ಎಂದು ಘೋಷಿಸಿತ್ತು. ಕಟ್ಟಡದ ದುರಸ್ತಿ ಕಾಮಗಾರಿ ನಡೆಯುತ್ತಿದ್ದಾಗ ರಾತ್ರಿ 9 ಗಂಟೆಯ ಸುಮಾರಿಗೆ ಭಾರೀ ಶಬ್ದದೊಂದಿಗೆ ಬಿರುಕು ಕಾಣಿಸಿಕೊಂಡಿತ್ತು. ತಕ್ಷಣ ಜಾಗೃತರಾದ ಸ್ಥಳೀಯರು ಹಲವು ಕುಟುಂಬಗಳನ್ನು ಸುರಕ್ಷಿತವಾಗಿ ಹೊರತರಲು ನೆರವಾದರಾದರೂ, ಇನ್ನು ಕೆಲವರು ಹೊರಬರುವಷ್ಟರಲ್ಲೇ ಕಟ್ಟಡದ ‘ಬಿ’ ವಿಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅವಶೇಷಗಳಡಿ ಇನ್ನೂ 6ರಿಂದ 7 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳದಲ್ಲಿ ಎನ್‌ಡಿಆರ್‌ಎಫ್, ಠಾಣೆ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ, ಶ್ವಾನ ದಳ ಹಾಗೂ ಸ್ಥಳೀಯ ಆಡಳಿತದ ಸಿಬ್ಬಂದಿ ನಾಲ್ಕು ಅಗ್ನಿಶಾಮಕ ವಾಹನಗಳು ಮತ್ತು ಜೆಸಿಬಿ ಯಂತ್ರಗಳ ನೆರವಿನಿಂದ ಸಮರೋಪಾದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.


