Thursday, July 30, 2026
Homeಕರಾವಳಿಪ್ರವಾಹದಲ್ಲಿ ಸಿಲುಕಿದ್ದ 73 ರ ವೃದ್ಧನ ರಕ್ಷಣೆ: ಶೌರ್ಯ ತಂಡದ ಸಾಹಸಮಯ ಕಾರ್ಯಾಚರಣೆ

ಪ್ರವಾಹದಲ್ಲಿ ಸಿಲುಕಿದ್ದ 73 ರ ವೃದ್ಧನ ರಕ್ಷಣೆ: ಶೌರ್ಯ ತಂಡದ ಸಾಹಸಮಯ ಕಾರ್ಯಾಚರಣೆ

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಬಾಡಿಗುಡ್ಡೆ ಸಮೀಪದ ಕಪಿಲಾ ನದಿಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾದ ಪರಿಣಾಮ ನದಿಯ ಮಧ್ಯಭಾಗದಲ್ಲಿ ಸಿಲುಕಿಕೊಂಡಿದ್ದ 73 ವರ್ಷದ ಬಾಲಪ್ಪ ಎಂಬ ವೃದ್ಧನನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಾಹಸಮಯ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ವೃದ್ಧ ಸಿಲುಕಿರುವುದನ್ನು ಗಮನಿಸಿದ ಸ್ಥಳೀಯ ಯುವಕರು ತಕ್ಷಣವೇ ನೀಡಿದ ಮಾಹಿತಿ ಮೇರೆಗೆ, ಶೌರ್ಯ ತಂಡದ ಸದಸ್ಯರಾದ ರಾಧಾಕೃಷ್ಣ ಗುತ್ತು, ರಮೇಶ್ ಬೈರಕಟ್ಟ ಹಾಗೂ ಸ್ಥಳೀಯ ಪರಿಣಿತ ಈಜುಗಾರ ಮೋಹನ ಗೌಡ ಬದ್ರಿಜಲು ಸ್ಥಳಕ್ಕೆ ಧಾವಿಸಿದರು. ಶಿಶಿಲೇಶ್ವರ ದೇವಸ್ಥಾನದ ವೆಂಟೆಡ್ ಅಣೆಕಟ್ಟಿನಿಂದ ಸುಮಾರು 900 ಮೀಟರ್ ಕೆಳಭಾಗದಲ್ಲಿ, ನದಿಯ ಎರಡು ಶಾಖೆಗಳ ಮಧ್ಯೆ ಸಿಲುಕಿದ್ದ ಅವರಿಗೆ ಲೈಫ್ ಜಾಕೆಟ್ ಧರಿಸಿ, ಹಗ್ಗಗಳ ನೆರವಿನಿಂದ ಸುರಕ್ಷಿತವಾಗಿ ದಡಕ್ಕೆ ಕರೆತರಲಾಯಿತು. ಈ ಯಶಸ್ವಿ ರಕ್ಷಣಾ ಕಾರ್ಯಾಚರಣೆಯಲ್ಲಿ ಉಮೇಶ್ ಕುಕ್ಕೆ, ರೂಪೇಶ್ ಬೈಪಾಡಿ ಹಾಗೂ ದಿನೇಶ್ ಬಾಡಿಗುಡ್ಡೆ ಅವರು ಸಕ್ರಿಯವಾಗಿ ಭಾಗವಹಿಸಿ ನೆರವಾದರು.

ಇನ್ನೊಂದೆಡೆ, ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದ್ದು, ಉಜಿರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆಗಳಿಗೆ ಹರಿದು ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದರು.

ರಾಷ್ಟ್ರೀಯ ಹೆದ್ದಾರಿಯ ಕೆಲವು ಭಾಗಗಳಲ್ಲಿ ಒಳಚರಂಡಿ ಕಾಮಗಾರಿ ಅಪೂರ್ಣವಾಗಿರುವುದು ಹಾಗೂ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮಣ್ಣು ತುಂಬಿ ನೀರು ಹರಿಯಲು ಅಡ್ಡಿಯಾಗುತ್ತಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಚರಂಡಿಗಳನ್ನು ಸ್ವಚ್ಛಗೊಳಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!