
ಮಂಗಳೂರು: ಬಂಟ್ವಾಳ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ನನ್ನು ಹಿಡಿಯುವಲ್ಲಿ ದಿನಗೂಲಿ ಕಾರ್ಮಿಕ ಗಿರೀಶ್ ಎಂಬುವವರು ತೋರಿದ ಅಸಾಮಾನ್ಯ ಧೈರ್ಯ ಮತ್ತು ಸಮಯಪ್ರಜ್ಞೆ ಸಾರ್ವಜನಿಕರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಶುಕ್ರವಾರ ಬೆಳಿಗ್ಗೆ ವಾಮಂಜೂರಿನ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಆಲ್ಟೋ ಕಾರಿನಲ್ಲಿ ಬಂದಿದ್ದ ಆರೋಪಿಯನ್ನು ನೋಡಿದ ಗಿರೀಶ್, ಮೊಬೈಲ್ನಲ್ಲಿ ನೋಡಿದ್ದ ಆತನ ಫೋಟೋ ಆಧಾರದ ಮೇಲೆ ಗುರುತಿಸಿದ್ದಾರೆ. ತಕ್ಷಣ ಕಾರಿನ ಬಳಿ ತೆರಳಿ ನೇರವಾಗಿ ಪ್ರಶ್ನಿಸಿದಾಗ ಚೇತನ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಆರೋಪಿ ಚಾಕು ತೆಗೆಯಲು ಯತ್ನಿಸಿದಾಗಲೂ ಜಗ್ಗದ ಗಿರೀಶ್, ಆತನೊಂದಿಗೆ ಹೋರಾಡಿ ಕಾರಿನ ಕೀಲಿಯನ್ನು ಕಸಿದುಕೊಂಡಿದ್ದಾರೆ. ಅಷ್ಟರಲ್ಲಿ ಆರೋಪಿ ತಂದಿದ್ದ ದ್ರವವನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರ ನೆರವಿನಿಂದ ಆರೋಪಿಯನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೇವಲ ಅರ್ಧ ಗಂಟೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಚೇತನ್ನನ್ನು ಬಂಧಿಸಿದ್ದಾರೆ. ಕೊಲೆಗಡುಕನನ್ನು ಹಿಡಿಯಲೇಬೇಕೆಂಬ ಗಿರೀಶ್ ಅವರ ಈ ದಿಟ್ಟತನವನ್ನು ಪೊಲೀಸ್ ಇಲಾಖೆ ಹಾಗೂ ಸ್ಥಳೀಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.


