
ಮಂಗಳೂರು ಬಿ.ಸಿ. ರೋಡ್‌ನಲ್ಲಿ ನಡೆದ ಯುವತಿಯ ಬರ್ಬರ ಹತ್ಯೆ ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಆರೋಪಿಗೆ ಯಾವುದೇ ಕಾರಣಕ್ಕೂ ಜಾಮೀನು ದೊರೆಯದಂತೆ ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದೆ.
ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ನಗರ ವಿಭಾಗದ ಅಧ್ಯಕ್ಷೆ ಎಸ್. ಅಪ್ಪಿ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಇಂದು ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.
ದೇಶವನ್ನು ಮುನ್ನಡೆಸಬೇಕಾದ ಯುವಕರು ಇಂತಹ ಹತ್ಯೆ ಕೃತ್ಯಗಳಿಗೆ ಇಳಿದಿರುವುದು ಶೋಚನೀಯವಾಗಿದ್ದು, ಮಹಿಳೆಯರ ಮೇಲಿನ ನಿರಂತರ ಹಿಂಸಾಚಾರ, ಅಪರಾಧ ಕೃತ್ಯಗಳು ಹಾಗೂ ಮಾನವೀಯತೆಯ ಕುಸಿತ ಸಮಾಜವನ್ನು ಬೆಚ್ಚಿಬೀಳಿಸಿದೆ ಎಂದ ಅವರು, ಈ ಘಟನೆಗಳ ಹಿಂದೆ ಇರುವ ಕಾಣದ ಕೈಗಳು ಯಾವುವು ಎಂಬುದನ್ನು ಪತ್ತೆಹಚ್ಚಬೇಕಿದೆ ಎಂದು ಹೇಳಿದರು.
ಇಂತಹ ಭೀಕರ ಕೃತ್ಯಗಳು ಮುಂದೆ ಮರುಕಳಿಸದಂತೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕು ಮತ್ತು ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಸಾರ್ವಜನಿಕರ ಜವಾಬ್ದಾರಿಯನ್ನು ನೆನಪಿಸಿದ ಅವರು, ಅಪರಾಧಗಳು ನಡೆಯುವಾಗ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುವ ಬದಲು ಸಾರ್ವಜನಿಕರು ತಕ್ಷಣ ಘಟನೆಯನ್ನು ತಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದ್ದಲ್ಲದೆ, ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಮುಖ್ಯಮಂತ್ರಿಯವರನ್ನು ಒತ್ತಾಯಿಸುವುದಾಗಿ ತಿಳಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಮಹಿಳಾ ಮುಖಂಡರಾದ ವೀಣಾ ಬೆನೆಡಿಕ್ಟ್, ಗೀತಾ ಪ್ರವೀಣ್, ಕಲಾ ಜ್ಯೋತಿ, ವೃಂದಾ, ಶಾಂತಲಾ ಗಟ್ಟಿ ಹಾಗೂ ಚಂಚಲಾಕ್ಷಿ ಉಪಸ್ಥಿತರಿದ್ದರು.


