Saturday, July 18, 2026
Homeತಾಜಾ ಸುದ್ದಿಮಾಜಿ ಸಿಎಂ ಜಯಲಲಿತಾ ನಿವಾಸ 'ವೇದಾ ನಿಲಯಂ' ಖರೀದಿಗೆ ಮುಂದಾದರಾ ತಮಿಳುನಾಡು ಸಿಎಂ ವಿಜಯ್?

ಮಾಜಿ ಸಿಎಂ ಜಯಲಲಿತಾ ನಿವಾಸ ‘ವೇದಾ ನಿಲಯಂ’ ಖರೀದಿಗೆ ಮುಂದಾದರಾ ತಮಿಳುನಾಡು ಸಿಎಂ ವಿಜಯ್?

- Advertisement -
- Advertisement -

ಚೆನ್ನೈ: ಸಿನಿಮಾ ರಂಗದಿಂದ ಬಂದು ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ವಿಜಯ್ ಸಿ. ಜೋಸೆಫ್ (ದಳಪತಿ ವಿಜಯ್) ಅವರ ಬಗ್ಗೆ ಈಗ ದೇಶಾದ್ಯಂತ ಭಾರಿ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ, ತಮಿಳುನಾಡು ರಾಜಕೀಯದ ಶಕ್ತಿಕೇಂದ್ರವಾಗಿದ್ದ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಖ್ಯಾತ ‘ವೇದಾ ನಿಲಯಂ’ (ಪೋಯಸ್ ಗಾರ್ಡನ್) ನಿವಾಸವನ್ನು ಖರೀದಿಸಲು ಸಿಎಂ ವಿಜಯ್ ಚಿಂತನೆ ನಡೆಸುತ್ತಿದ್ದಾರೆ ಎಂಬ ಅಚ್ಚರಿಯ ಸುದ್ದಿಯೊಂದು ಹರಿದಾಡುತ್ತಿದೆ.ಸುಮಾರು 350 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯ ಹೊಂದಿರುವ ಈ ಐತಿಹಾಸಿಕ ಬಂಗಲೆಯನ್ನು ಖರೀದಿಸುವ ಸಂಬಂಧ ಆರಂಭಿಕ ಹಂತದ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಸಿಎಂ ವಿಜಯ್ ಸದ್ಯ ಚೆನ್ನೈನ ನೀಲಂಗರೈನಲ್ಲಿರುವ ತಮ್ಮ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಅಲ್ಲಿಂದ ಪ್ರತಿದಿನ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಬರಲು ಸುಮಾರು 17 ಕಿಲೋಮೀಟರ್ ಸಂಚರಿಸಬೇಕಾಗುತ್ತದೆ. ಮುಖ್ಯಮಂತ್ರಿಗಳ ಈ ಸುದೀರ್ಘ ಪ್ರಯಾಣದಿಂದಾಗಿ ಭದ್ರತಾ ಕಾರಣಗಳ ಜೊತೆಗೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನ ಹೃದಯ ಭಾಗಕ್ಕೇ ಶಿಫ್ಟ್ ಆಗಲು ವಿಜಯ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿಗಳಿಗೆ ಸರ್ಕಾರಿ ಬಂಗಲೆಯ ಅವಕಾಶವಿದ್ದರೂ, ವಿಜಯ್ ಅವರು ತಮ್ಮದೇ ಸ್ವಂತ ನಿವಾಸ ಹೊಂದಲು ಬಯಸಿದ್ದಾರೆ. ಹೀಗಾಗಿ, ಜಯಲಲಿತಾ ಅವರ ನಿಧನದ ಬಳಿಕ ದೀರ್ಘ ಕಾನೂನು ಹೋರಾಟ ನಡೆಸಿ ಸದ್ಯ ಬಂಗಲೆಯ ವಾರಸುದಾರರಾಗಿರುವ ಜಯಲಲಿತಾ ಅಣ್ಣನ ಮಗಳು ಜೆ. ದೀಪಾ ಅವರೊಂದಿಗೆ ವಿಜಯ್ ಅವರ ಪ್ರತಿನಿಧಿಗಳು ಮಾತುಕತೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ಕಾಲದಲ್ಲಿ ಇಡೀ ತಮಿಳುನಾಡು ರಾಜಕಾರಣವನ್ನು ನಿಯಂತ್ರಿಸುತ್ತಿದ್ದ ಪೋಯಸ್ ಗಾರ್ಡನ್ ನಿವಾಸವನ್ನು ಈಗಿನ ಮುಖ್ಯಮಂತ್ರಿ ವಿಜಯ್ ಅವರೇ ಖರೀದಿಸಿದರೆ, ಅದು ಮತ್ತೆ ರಾಜಕೀಯದ ಪ್ರಮುಖ ಕೇಂದ್ರ ಬಿಂದುವಾಗುವುದರಲ್ಲಿ ಸಂಶಯವಿಲ್ಲ. ಮಾತುಕತೆ ಯಶಸ್ವಿಯಾದರೆ ಇದು ತಮಿಳುನಾಡಿನ ಅತ್ಯಂತ ಬೃಹತ್ ರಿಯಲ್ ಎಸ್ಟೇಟ್ ಡೀಲ್ ಆಗಿ ಹೊರಹೊಮ್ಮಲಿದೆ.

- Advertisement -

Latest News

error: Content is protected !!