Wednesday, July 15, 2026
HomeWorldಒಮನ್ ಸಮೀಪ ಹಡಗಿನ ಮೇಲೆ ಕ್ಷಿಪಣಿ ದಾಳಿ: ಒಮನ್ ನೌಕಾಪಡೆಯಿಂದ ಬಂಟ್ವಾಳ ತಾಲೂಕಿನ ಯುವ ನಾವಿಕನ...

ಒಮನ್ ಸಮೀಪ ಹಡಗಿನ ಮೇಲೆ ಕ್ಷಿಪಣಿ ದಾಳಿ: ಒಮನ್ ನೌಕಾಪಡೆಯಿಂದ ಬಂಟ್ವಾಳ ತಾಲೂಕಿನ ಯುವ ನಾವಿಕನ ರಕ್ಷಣೆ

- Advertisement -
- Advertisement -

ಬಂಟ್ವಾಳ: ಹಾರ್ಮುಝ್ ಜಲಸಂಧಿಯ ಒಮನ್ ಕರಾವಳಿಯ ಸಮೀಪ ಚಲಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಇರಾನ್ ದೇಶವು ಕ್ಷಿಪಣಿ ದಾಳಿ ನಡೆಸಿದ್ದು, ಈ ವೇಳೆ ಒಮನ್ ನೌಕಾಪಡೆಯಿಂದ ರಕ್ಷಿಸಲ್ಪಟ್ಟ 10 ಭಾರತೀಯ ನಾವಿಕರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ನಿವಾಸಿ ರಚನ್ ಆರ್.ಕೆ. ಸುರಕ್ಷಿತವಾಗಿ ಪಾರಾಗಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕಾರ್ಗೋ ಶಿಪ್ಪಿಂಗ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಪ್ರಯಾಣಿಸುತ್ತಿದ್ದ ಹಡಗಿನ ಮೇಲೆ ದಾಳಿ ನಡೆದಿದ್ದು, ತಕ್ಷಣವೇ ಹಡಗಿನ ಇಂಜಿನ್ ಕೊಠಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಅಪಾಯದ ತೀವ್ರತೆಯನ್ನು ಅರಿತ ಸಿಬ್ಬಂದಿ ತಕ್ಷಣವೇ ಪ್ರಾಣ ರಕ್ಷಕ ದೋಣಿಗಳ ಮೂಲಕ ಸಮುದ್ರಕ್ಕೆ ಧುಮುಕಿದ್ದು, ಈ ವೇಳೆ ಅವರ ತಂಡದಲ್ಲಿದ್ದ ಪುಣೆ ನಿವಾಸಿಯೊಬ್ಬರು ನಾಪತ್ತೆಯಾಗಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಒಮನ್ ನೌಕಾಪಡೆಯು ರಚನ್ ಸೇರಿದಂತೆ ಉಳಿದ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ತನ್ನ ನೆಲೆಗೆ ಕರೆದೊಯ್ದಿದೆ.

ಸದ್ಯ ಒಮನ್ ಶಿಪ್ಪಿಂಗ್ ಕಂಪನಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿರುವ ರಚನ್ ತಮಗೆ ಒದಗಿಸಲಾಗಿರುವ ಸುರಕ್ಷಿತ ಆಶ್ರಯದ ಬಗ್ಗೆ ತಂದೆಗೆ ಮಾಹಿತಿ ನೀಡಿದ್ದಾರೆ. ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ಮಗನ ಮೇಲಿನ ದಾಳಿಯ ಸುದ್ದಿಯಿಂದ ಕಳವಳಗೊಂಡಿದ್ದ ಕುಟುಂಬಸ್ಥರು, ಆತ ಸುರಕ್ಷಿತವಾಗಿರುವ ಸುದ್ದಿ ಕೇಳಿ ನಿರಾಳರಾಗಿದ್ದು, ಸಂಕಷ್ಟದ ಸಮಯದಲ್ಲಿ ನೆರವಾದ ಒಮನ್ ನೌಕಾಪಡೆಗೆ ರಚನ್ ತಂದೆ ರೋಹಿತಾಕ್ಷ ಬಾಣಬೆಟ್ಟು ಕೃತಜ್ಞತೆ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!