
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನವವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಂಭವಿಸಿದೆ. ಮದುವೆಯಾಗಿ ಕೇವಲ ನಾಲ್ಕೇ ತಿಂಗಳಿಗೆ ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ಸಾವಿಗೆ ಶರಣಾಗಿದ್ದಾರೆ.
ಚಿಕ್ಕಮಗಳೂರು ಮೂಲದ 25 ವರ್ಷದ ಶ್ವೇತಾ, ಸುಂಕದಕಟ್ಟೆಯ ತಮ್ಮ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ನಾಲ್ಕು ತಿಂಗಳ ಹಿಂದಷ್ಟೇ ಕಮಲನಗರದ ದೇವಸ್ಥಾನದಲ್ಲಿ ಪ್ರೇಮ ವಿವಾಹವಾಗಿದ್ದ ಶ್ವೇತಾ, ಭಾನುವಾರ ರಾತ್ರಿ ಸಾವಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಶ್ವೇತಾ ಬರೆದಿಟ್ಟಿರುವ ಡೆತ್‌ನೋಟ್ ಈಗ ಲಭ್ಯವಾಗಿದ್ದು, ಅದರಲ್ಲಿ ತಮ್ಮ ಪತಿ ಮತ್ತು ಪತಿಯ ಅಕ್ಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
“ಅಮ್ಮ, ನನ್ನ ಸಾವಿಗೆ ನನ್ನ ಗಂಡ ಮತ್ತು ಅವರ ಅಕ್ಕನೇ ಕಾರಣ. ಅವರಿಂದ ನನಗೆ ತೀವ್ರ ಹಿಂಸೆಯಾಗುತ್ತಿತ್ತು. ನನಗೆ ಬದುಕಲು ಆಸೆಯೇ ಇಲ್ಲದಂತೆ ಮಾಡಿದ್ದಾರೆ. ನಾನು ಸತ್ತ ಮೇಲೆ ಅವರನ್ನು ಮಾತ್ರ ಸುಮ್ಮನೆ ಬಿಡಬೇಡ ಅಮ್ಮ. ನನ್ನನ್ನು ಕ್ಷಮಿಸು” ಎಂದು ಬರೆದಿದ್ದಾರೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಡೆತ್‌ನೋಟ್ ವಶಕ್ಕೆ ಪಡೆದಿದ್ದಾರೆ. ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


