
ಮಂಗಳೂರು; ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿನಡ್ಕ ಸಮೀಪದ ಕವತ್ತಾರು ಬಳಿ ನಡೆದಿದೆ. ಬಾಲಕೃಷ್ಣ ಶೆಟ್ಟಿಗಾರ್ ಎಂಬವರ ಮನೆಯ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.
ಪಂಜಿನಡ್ಕ-ಕವತ್ತಾರು ಮುಖ್ಯ ರಸ್ತೆಯ ಬಳಿಯ ‘ಶ್ರೀ ಭ್ರಾಮರಿ’ ಮನೆಯಲ್ಲಿ ಬಾಲಕೃಷ್ಣ ಶೆಟ್ಟಿಗಾರ್ , ಅವರ ಪತ್ನಿ ನಳಿನಾಕ್ಷಿ ಶೆಟ್ಟಿಗಾರ್ ಹಾಗೂ ಇತ್ತೀಚೆಗಷ್ಟೇ ಮದುವೆಯಾದ ಮಗ ಸುಶೀಲ್ ಮತ್ತು ಅವರ ಪತ್ನಿ ವಾಸವಿದ್ದಾರೆ. ಶನಿವಾರ ಬೆಳಿಗ್ಗೆ ಬಾಲಕೃಷ್ಣ ಶೆಟ್ಟಿಗಾರ್ ಮಗ ಹಾಗೂ ಸೊಸೆ ಕೆಲಸಕ್ಕೆ ಹೋಗಿದ್ದು, ನಳಿನಾಕ್ಷಿ ಅವರು ಕಾಪುವಿನ ಮಾರಿಗುಡಿ ದೇವಸ್ಥಾನಕ್ಕೆ ಬೆಳಿಗ್ಗೆ 11 ಗಂಟೆಗೆ ಹೋಗಿ ವಾಪಸ್ ಬರುವಾಗ ಮನೆಯಲ್ಲಿ ಕಳ್ಳತನ ನಡೆದಿದೆ.
ಕಳ್ಳರು ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿ ಕಪಾಟು ಹಾಗೂ ಡ್ರಾವರ್ ಜಾಲಾಡಿ ಬೆಡ್‌ರೂಮ್ ಕಪಾಟಿನಲ್ಲೇ ಇರಿಸಿದ್ದ ಬೀಗದ ಕೀ ಬಳಸಿ ಕವಾಟ ತೆರೆದು ಅದರಲ್ಲಿದ್ದ 5 ಚಿನ್ನದ ಉಂಗುರ, ಒಂದು ಬ್ರಾಸ್‌ಲೈಟ್, ಒಂದು ಚೈನ್ ಕಳವುಗೈದಿದ್ದಾರೆ. ಕಳ್ಳರು ಮತ್ತೊಂದು ಬೆಡ್‌ರೂಂಗೂ ನುಗ್ಗಿ ಅಲ್ಲಿದ್ದ ಕಪಾಟನ್ನೂ ಜಾಲಾಡಿ ಒಟ್ಟು ಸುಮಾರು 21 ಗ್ರಾಂ ಚಿನ್ನ ಕಳ್ಳತನ ಮಾಡಿದ್ದಾರೆ ಎಂದು ನಳಿನಾಕ್ಷಿ ಶೆಟ್ಟಿಗಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿಗಳು, ಮುಲ್ಕಿ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನ ದಳ ಆಗಮಿಸಿ ಘಟನಾ ಸ್ಥಳದಿಂದ 500 ಮೀಟರ್ ದೂರದ ಪಂಜಿನಡ್ಕ ಅಂಚೆ ಕಚೇರಿ ತನಕ ಹೋಗಿ ಸುತ್ತುವರಿದು ಹಿಂತಿರುಗಿದೆ. ಯಾರೋ ಗೊತ್ತಿದ್ದವರೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.


