
ಬಂಟ್ವಾಳ: ತಾಲೂಕಿನ ಪೆರ್ನೆ ಗ್ರಾಮದ ನೂಜಿನಡ್ಕ ಎಂಬಲ್ಲಿ ಮರದ ಗೆಲ್ಲು ಕಡಿಯುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.ನೂಜಿನಡ್ಕ ನಿವಾಸಿ ಚಂದಪ್ಪ ಪೂಜಾರಿ ಮೃತಪಟ್ಟ ದುರ್ದೈವಿ .
ಚಂದಪ್ಪ ಪೂಜಾರಿ ಅವರು ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದ ವೇಳೆ, ಒಂದು ಗೆಲ್ಲು ಸಮೀಪದಲ್ಲೇ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ ಎನ್ನಲಾಗಿದೆ. ಇದರಿಂದಾಗಿ ಮರದ ಮೂಲಕ ತಕ್ಷಣವೇ ವಿದ್ಯುತ್ ಪ್ರವಹಿಸಿ, ಚಂದಪ್ಪ ಅವರಿಗೆ ತೀವ್ರ ಸ್ವರೂಪದ ವಿದ್ಯುತ್ ಆಘಾತ ಉಂಟಾಗಿದೆ.
ದುರ್ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ರಕ್ಷಣೆಗೆ ಧಾವಿಸಿ, ಚಂದಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಆದರೆ ವಿದ್ಯುತ್ ಆಘಾತದ ತೀವ್ರತೆಗೆ ಅವರು ಅಷ್ಟರಲ್ಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


