Wednesday, July 8, 2026
Homeಕರಾವಳಿಮಂಗಳೂರುಭೂ ನ್ಯಾಯ ಮಂಡಳಿ ಸಭೆಯಲ್ಲೇ ಕುಸಿದು ಬಿದ್ದು ಕಂಬಳದ ಖ್ಯಾತ ವೀಕ್ಷಕ ವಿವರಣೆಗಾರರಾದ ನಿರಂಜನ ರೈ...

ಭೂ ನ್ಯಾಯ ಮಂಡಳಿ ಸಭೆಯಲ್ಲೇ ಕುಸಿದು ಬಿದ್ದು ಕಂಬಳದ ಖ್ಯಾತ ವೀಕ್ಷಕ ವಿವರಣೆಗಾರರಾದ ನಿರಂಜನ ರೈ ಮಠಂತಬೆಟ್ಟು ನಿಧನ: ಶಾಸಕ ಅಶೋಕ್ ರೈ ಸಂತಾಪ

- Advertisement -
- Advertisement -

 ಪುತ್ತೂರು ಭೂ ನ್ಯಾಯ ಮಂಡಳಿ ಸದಸ್ಯ ಹಾಗೂ ಕಂಬಳ ಕ್ಷೇತ್ರದ ಖ್ಯಾತ ವೀಕ್ಷಕ ವಿವರಣೆಗಾರರಾದ ನಿರಂಜನ ರೈ ಮಠಂತಬೆಟ್ಟು (54) ಅವರು ಬುಧವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆಯುತ್ತಿದ್ದ ಅಧಿಕೃತ ಸಭೆಯಲ್ಲೇ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರ ನೇತೃತ್ವದಲ್ಲಿ ಎಸಿ ಕಚೇರಿಯಲ್ಲಿ ಭೂ ನ್ಯಾಯ ಮಂಡಳಿಯ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ನಿರಂಜನ ರೈ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಅವರು ನಿರಂಜನ ರೈ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಉಪ್ಪಿನಂಗಡಿ ಸಮೀಪದ ಮಠಂತಬೆಟ್ಟು ನಿವಾಸಿಯಾಗಿದ್ದ ನಿರಂಜನ ರೈ ಅವರು ಕರಾವಳಿಯ ಜಾನಪದ ಕ್ರೀಡೆ ಕಂಬಳ ರಂಗದಲ್ಲಿ ಅತ್ಯಂತ ಜನಪ್ರಿಯರಾಗಿದ್ದರು. ಕಂಬಳದ ಕುರಿತಾದ ಅಪಾರ ಜ್ಞಾನ, ಸ್ಪಷ್ಟ ನಿರೂಪಣೆ ಹಾಗೂ ತಮ್ಮದೇ ಆದ ವಿಶಿಷ್ಟ ಶೈಲಿಯ ವೀಕ್ಷಕ ವಿವರಣೆಯ ಮೂಲಕ ಕಂಬಳ ಅಭಿಮಾನಿಗಳ ಮನಗೆದ್ದಿದ್ದರು. ಪ್ರಸ್ತುತ ಅವರು ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷರಾಗಿ ಹಾಗೂ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

ಧಾರ್ಮಿಕ ಹಾಗೂ ಸಹಕಾರಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ರೈ ಅವರು, ಕೋಡಿಂಬಾಡಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ, ಬನ್ನೂರು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಹಾಗೂ ಬಂಟರ ಸಂಘದ ಪ್ರಮುಖ ಮುಖಂಡರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಶಾಸಕ ಅಶೋಕ್ ರೈ ತೀವ್ರ ಸಂತಾಪ

ತಮ್ಮ ಆತ್ಮೀಯ ಒಡನಾಡಿಯಾಗಿದ್ದ ನಿರಂಜನ ರೈ ಮಠಂತಬೆಟ್ಟು ಅವರ ಅಕಾಲಿಕ ನಿಧನಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಧಾರ್ಮಿಕ, ಸಾಮಾಜಿಕ ಹಾಗೂ ಕಂಬಳ ರಂಗದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ನಿರಂಜನ ರೈ ಅವರು ಮೃದು ಸ್ವಭಾವದ ಸಜ್ಜನ ವ್ಯಕ್ತಿಯಾಗಿದ್ದರು. ಭಗವಂತನು ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಕಂಬನಿ ಮಿಡಿದಿದ್ದಾರೆ. ಆತ್ಮೀಯನ ಅಂತಿಮ ದರ್ಶನ ಪಡೆಯಲು ಶಾಸಕರು ಬೆಂಗಳೂರಿನ ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಇಂದು ರಾತ್ರಿ ಪುತ್ತೂರಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!