Thursday, August 20, 2026
Homeಪ್ರಮುಖ-ಸುದ್ದಿಮುಂಬೈ-ಪುಣೆ ನಡುವೆ ಭಾರೀ ಮಳೆ ಹಾಗೂ ಭೂಕುಸಿತ: ಸಂಪೂರ್ಣ ಸ್ತಬ್ಧಗೊಂಡ ಸಾರಿಗೆ ಸಂಪರ್ಕ

ಮುಂಬೈ-ಪುಣೆ ನಡುವೆ ಭಾರೀ ಮಳೆ ಹಾಗೂ ಭೂಕುಸಿತ: ಸಂಪೂರ್ಣ ಸ್ತಬ್ಧಗೊಂಡ ಸಾರಿಗೆ ಸಂಪರ್ಕ

- Advertisement -
- Advertisement -

ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಯ ಆರ್ಭಟಕ್ಕೆ ಮುಂಬೈ ಮತ್ತು ಪುಣೆ ನಡುವಿನ ರಸ್ತೆ ಹಾಗೂ ರೈಲು ಸಾರಿಗೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಮುಂಜಾನೆ ಸುಮಾರಿಗೆ ಕರ್ಜತ್-ಲೋನಾವಾಲಾ ನಡುವಿನ ಬೋರ್ ಘಾಟ್ ಸೆಕ್ಷನ್‌ನಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿ, ರೈಲ್ವೆ ಹಳಿಗಳ ಮೇಲೆ ಬಂಡೆಗಳು ಮತ್ತು ಮಣ್ಣು ಬಿದ್ದಿರುವುದರಿಂದ ಮುಂಬೈ-ಪುಣೆ ನಡುವಿನ ಮೂರು ಪ್ರಮುಖ ರೈಲು ಮಾರ್ಗಗಳು ಬಂದ್ ಆಗಿವೆ. ಇದರ ಪರಿಣಾಮವಾಗಿ ಪ್ರಸಿದ್ಧ ಡೆಕ್ಕನ್ ಕ್ವೀನ್, ಇಂದ್ರಾಯಣಿ, ಇಂಟರ್‌ಸಿಟಿ, ಪ್ರಗತಿ ಮತ್ತು ಸಿಂಹಗಡ ಎಕ್ಸ್‌ಪ್ರೆಸ್‌ ಸೇರಿದಂತೆ ಕನಿಷ್ಠ 16 ರೈಲುಗಳನ್ನು ರದ್ದುಗೊಳಿಸಲಾಗಿದ್ದು, 9 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮತ್ತೊಂದೆಡೆ, ಖೋಪೋಲಿ-ಕುಸಗಾಂವ್ ಲಿಂಕ್‌ನ ಸುರಂಗ ಮಾರ್ಗದ ಬಳಿ ಭೂಕುಸಿತ ಉಂಟಾಗಿ, ಕಾಂಕ್ರೀಟ್ ಪಿಲ್ಲರ್ ರಸ್ತೆಗೆ ಉರುಳಿರುವುದರಿಂದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಹಾಗೂ ಹಳೇ ಹೆದ್ದಾರಿ ಎರಡರಲ್ಲೂ ವಾಹನ ಸಂಚಾರವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ.

ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು (IMD) ಪುಣೆಗೆ ‘ರೆಡ್‌ ಅಲರ್ಟ್’ ಹಾಗೂ ಮುಂಬೈಗೆ ‘ಆರೆಂಜ್ ಅಲರ್ಟ್‌’ ಘೋಷಿಸಿದ್ದು, ಮುಂಬೈ, ಪುಣೆ, ಥಾಣೆ ಮತ್ತು ಪಾಲ್ಗರ್ ಜಿಲ್ಲೆಗಳ ಎಲ್ಲಾ ಶಾಲೆ-ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಗಿದೆ. ಸದ್ಯ ಮಾರ್ಗಮಧ್ಯದಲ್ಲೇ ಸಾವಿರಾರು ಪ್ರಯಾಣಿಕರು ಸಿಲುಕಿ ಪರದಾಡುತ್ತಿದ್ದು, ಹಳಿ ಹಾಗೂ ರಸ್ತೆಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಸಾರ್ವಜನಿಕರು ತುರ್ತು ಕೆಲಸಗಳಿಲ್ಲದಿದ್ದರೆ ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣವನ್ನು ಮುಂದೂಡುವಂತೆ ಹೆದ್ದಾರಿ ಸಂಚಾರ ಪೊಲೀಸ್ ಮತ್ತು ಮುಂಬೈ ಪೊಲೀಸರು ಜಂಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!