
ಬಂಟ್ವಾಳ :ನಾಗರಹಾವು ಕಚ್ಚಿ ಆಟೋ ಚಾಲಕ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸೆರ್ಕಳ ಕುದ್ಕಾರ್‌ನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಸೆರ್ಕಳ ಕುದ್ಕಾರ್ ನಿವಾಸಿ ಸುಲೈಮಾನ್ ಅವರ ಪುತ್ರ ಹಾಗೂ ಆಟೋ ಚಾಲಕರಾದ ಹಸೈನಾರ್ (50) ಮೃತರು.
ಹಸೈನಾರ್ ಅವರು ಬುಧವಾರ ಬೆಳಿಗ್ಗೆ ಮನೆಯ ಸಮೀಪದಲ್ಲಿ ಇರಿಸಿದ್ದ ಹುಲ್ಲು ಕತ್ತರಿಸುವ ಯಂತ್ರವನ್ನು ಎತ್ತಲು ಮುಂದಾದ ವೇಳೆ ಅದರ ಕೆಳಗೆ ಅಡಗಿಕೊಂಡಿದ್ದ ನಾಗರಹಾವು ಹಸೈನಾರ್ ಅವರಿಗೆ ಕಚ್ಚಿದೆ. ವಿಷಪೂರಿತ ಹಾವಿನ ಕಡಿತದಿಂದ ಅವರು ತೀವ್ರ ಅಸ್ವಸ್ಥಗೊಂಡಿದ್ದು, ಸ್ಥಳೀಯರು ತಕ್ಷಣವೇ ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕಂಕನಾಡಿಯ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಉರಗ ರಕ್ಷಕ ಹೈದರ್ ಸ್ಥಳಕ್ಕೆ ಆಗಮಿಸಿ, ಹುಲ್ಲು ಕತ್ತರಿಸುವ ಯಂತ್ರದ ಬಳಿ ಅಡಗಿಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟರು.


