Thursday, July 2, 2026
HomeWorldದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಉಗ್ರರ ಸಂಚು: ಐಎಸ್‌ಐ ಬೆಂಬಲಿತ ನಾಲ್ವರು ಶಂಕಿತ ಉಗ್ರರ ಬಂಧನ!

ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಉಗ್ರರ ಸಂಚು: ಐಎಸ್‌ಐ ಬೆಂಬಲಿತ ನಾಲ್ವರು ಶಂಕಿತ ಉಗ್ರರ ಬಂಧನ!

- Advertisement -
- Advertisement -

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಮತ್ತು ಅಲ್ಲಿನ ಹ್ಯಾಂಡ್ಲರ್‌ಗಳ ನಿರ್ದೇಶನದ ಮೇರೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಉಗ್ರ ದಾಳಿ ನಡೆಸಲು ಸಂಚು ರೂಪಿಸಿದ್ದ ನಾಲ್ವರು ಶಂಕಿತರನ್ನು ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ.

ಬಂಧಿತ ಆರೋಪಿಗಳನ್ನು ಪಂಜಾಬ್ ಮೂಲದ ಶುಭದೀಪ್ ಸಿಂಗ್ (23), ಗುರ್ಜಂತ್ ಸಿಂಗ್ (22), ಸಾಜನ್ ಸಿಂಗ್ (28) ಹಾಗೂ ದೆಹಲಿಯ ಗಗನ್‌ ಪ್ರೀತ್ (24) ಎಂದು ಗುರುತಿಸಲಾಗಿದೆ. ಉಗ್ರ ಚಟುವಟಿಕೆಗಳ ಕುರಿತು ಲಭ್ಯವಾದ ಖಚಿತ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಎಸಿಪಿ ವಿವೇಕ್ ಕುಮಾರ್ ತ್ಯಾಗಿ ಅವರ ನೇತೃತ್ವದ ಪೊಲೀಸ್ ತಂಡ ದೆಹಲಿ ಹಾಗೂ ಪಂಜಾಬ್‌ನ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿ ಈ ಕಾರ್ಯಾಚರಣೆ ಕೈಗೊಂಡಿದೆ.

ತನಿಖೆಯ ವೇಳೆ ಮೊದಲು ಪಂಜಾಬ್‌ನ ಅಮೃತಸರದಲ್ಲಿ ಶುಭದೀಪ್ ಸಿಂಗ್‌ನನ್ನು ಬಂಧಿಸಲಾಗಿದ್ದು, ಆತ ನೀಡಿದ ಸುಳಿವುಗಳ ಆಧಾರದ ಮೇಲೆ ಗುರ್ಜಂತ್ ಸಿಂಗ್ ಮತ್ತು ಸಾಜನ್ ಸಿಂಗ್‌ನನ್ನು ಪಂಜಾಬ್‌ನ ಬೇರೆ ಬೇರೆ ಕಡೆಗಳಲ್ಲಿ ವಶಕ್ಕೆ ಪಡೆಯಲಾಯಿತು. ಇನ್ನು ನಾಲ್ಕನೇ ಆರೋಪಿ ಗಗನ್‌ಪ್ರೀತ್‌ನನ್ನು ಏಪ್ರಿಲ್ 24 ರಂದು ದೆಹಲಿಯಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಎರಡು ವಿದೇಶಿ ತಯಾರಿಕೆಯ ಪಿಸ್ತೂಲ್‌ಗಳು, ಒಂಬತ್ತು ಜೀವಂತ ಗುಂಡುಗಳು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಉಘಾಡ ರಹಸ್ಯಗಳನ್ನು ಬಾಯ್ಬಿಟ್ಟಿದ್ದಾರೆ. ಭಾರತೀಯ ಭದ್ರತಾ ಸಂಸ್ಥೆಗಳ ಕಣ್ಣಾವಲಿನಿಂದ ತಪ್ಪಿಸಿಕೊಳ್ಳಲು ಇವರು ವಿದೇಶಿ ಅಥವಾ ವರ್ಚುವಲ್ ದೂರವಾಣಿ ಸಂಖ್ಯೆಗಳ ಮೂಲಕ ಸಂವಹನ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಗಡಿಯಾಚೆಯಿಂದ ಡ್ರೋನ್‌ಗಳ ಮೂಲಕ ಭಾರತದೊಳಗೆ ಶಸ್ತ್ರಾಸ್ತ್ರಗಳು ಹಾಗೂ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಜಾಲದೊಂದಿಗೂ ಇವರು ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!