
ಮಂಗಳೂರು: ಕಂಕನಾಡಿ ಸಮೀಪದ ನಾಗುರಿ ಗರೋಡಿಯಲ್ಲಿ ಭಾರೀ ಮಳೆಯಿಂದಾಗಿ ತಡೆಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಇಬ್ಬರು ಹಾಗೂ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿರುವ ಸಂತ್ರಸ್ತ ಕುಟುಂಬಗಳ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, “ಇದೊಂದು ಅತ್ಯಂತ ದುರದೃಷ್ಟಕರ ಘಟನೆಯಾಗಿದ್ದು, ಇಡೀ ನಗರವೇ ಕಂಬನಿ ಮಿಡಿಯುವಂತೆ ಮಾಡಿದೆ. ಮೃತರ ಕುಟುಂಬದವರಿಗೆ ಯಾವುದೇ ರೀತಿಯ ವಿಳಂಬಕ್ಕೆ ಆಸ್ಪದವಿಲ್ಲದಂತೆ ಸೂಕ್ತ ಮತ್ತು ಗರಿಷ್ಠ ಪರಿಹಾರ ಧನ ಲಭಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ತುರ್ತು ಮಾತುಕತೆ ನಡೆಸಿದ್ದೇನೆ” ಎಂದು ತಿಳಿಸಿದರು.
ಸ್ಥಳ ಪರಿಶೀಲನೆಯ ನಂತರ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು. ಗಾಯಾಳುಗಳ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಕರಾವಳಿಯಲ್ಲಿ ಮಳೆಯ ಪ್ರಮಾಣ ಇನ್ನು ಕೆಲವು ದಿನಗಳ ಕಾಲ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಈಗಾಗಲೇ ಪ್ರಕೃತಿ ವಿಕೋಪಕ್ಕೆ ತುತ್ತಾಗಬಹುದಾದ ಅಪಾಯಕಾರಿ ಪ್ರದೇಶಗಳು ಎಂದು ಗುರುತಿಸಲಾಗಿರುವ ಜಾಗಗಳಲ್ಲಿ ವಾಸಿಸುತ್ತಿರುವ ಜನರ ರಕ್ಷಣೆಗೆ ಜಿಲ್ಲಾಡಳಿತವು ತಕ್ಷಣವೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸಬೇಕು ಎಂದು ಶಾಸಕರು ಆಗ್ರಹಿಸಿದರು. ಇದರೊಂದಿಗೆ ಸಾರ್ವಜನಿಕರೂ ಕೂಡ ಮಳೆಗಾಲದಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.


