
ಮಂಗಳೂರು; ‘ಜೂನಿಯರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ’ ಎಂದೇ ಕರಾವಳಿಯುದ್ದಕ್ಕೂ ಪ್ರಸಿದ್ಧಿ ಪಡೆದಿದ್ದ ಹಿರಿಯ ಬಹುಭಾಷಾ ಗಾಯಕ, ತೊಕ್ಕೊಟ್ಟು ಕಾಪಿಕಾಡು ಗಾಂಧಿನಗರ ನಿವಾಸಿ ಚಂದ್ರಹಾಸ್ ಸುವರ್ಣ (64) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಚಂದ್ರಹಾಸ್ ಸುವರ್ಣ ಅವರು ಸಂಗೀತವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದರು. ಕಳೆದ ನಾಲ್ಕು ದಶಕಗಳಿಂದ (40 ವರ್ಷಗಳು) ವಿವಿಧ ಆರ್ಕೆಸ್ಟ್ರಾ ತಂಡಗಳಲ್ಲಿ ಸಕ್ರಿಯರಾಗಿ ಕಾರ್ಯಕ್ರಮ ನೀಡುತ್ತಾ ಬಂದಿದ್ದ ಅವರು, ಪ್ರಸಿದ್ಧ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ಅದ್ಭುತವಾಗಿ ಹಾಡುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.
ಕೇವಲ ಕನ್ನಡ, ತುಳು ಮಾತ್ರವಲ್ಲದೆ ಕೊಂಕಣಿ ಭಾಷಾ ಹಾಡುಗಾರಿಕೆಯಲ್ಲೂ ಅಪಾರ ಹಿಡಿತ ಸಾಧಿಸಿದ್ದ ಚಂದ್ರಹಾಸ್ ಅವರು, ಕೊಂಕಣಿ ಜಗತ್ತಿನ ಪ್ರತಿಷ್ಠಿತ ಸಂಸ್ಥೆಯಾದ ‘ಮಾಂಡ್ ಸೊಭಾಣ್’ ಏರ್ಪಡಿಸಿದ್ದ ‘ಕೊಂಕಣಿ ಸೋದ್-2’ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಈ ಸಾಧನೆಗಾಗಿ ಅವರಿಗೆ ‘ರಾಯ್ ಕೋಗುಲ್’ (ಕೋಕಿಲ ರಾಜ) ಎಂಬ ಬಿರುದು ನೀಡಿ ಗೌರವಿಸಲಾಗಿತ್ತು.
ಕರಾವಳಿ ರಂಗಭೂಮಿಯ ದೈತ್ಯ ಪ್ರತಿಭೆಗಳಾದ ಕೆ.ಎನ್.ಟೈಲರ್ ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ನಾಟಕಗಳಿಗೆ ಹಿನ್ನೆಲೆ ಗಾಯನ ನೀಡಿದ್ದ ಚಂದ್ರಹಾಸ್ ಅವರು, ಹಲವಾರು ಜನಪ್ರಿಯ ಆಲ್ಬಮ್ ಗೀತೆಗಳಿಗೂ ಧ್ವನಿಯಾಗಿದ್ದರು.ಅವರ ನಿಧನಕ್ಕೆ ಕರಾವಳಿಯ ಕಲಾ ಲೋಕ, ರಿಕ್ಷಾ ಚಾಲಕ-ಮಾಲಕರ ಸಂಘ ಹಾಗೂ ಅಭಿಮಾನಿಗಳು ತೀವ್ರ ಕರಗಡ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.


