
ಬೆಳ್ತಂಗಡಿ : ಪದೇ ಪದೇ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಸುದ್ದಿ ಹೊರಬರುತ್ತಿರುವ ಬೆನ್ನಲ್ಲೇ ಮತ್ತೊಂದು ಆಸ್ಪತ್ರೆಯೊಳಗಿನ ಕರ್ಮಕಾಂಡ ಹೊರಬಂದಿದೆ. ಸರಕಾರಿ ಹುದ್ದೆಯಲ್ಲಿದ್ದು ಸರಕಾರದಿಂದ ಪ್ರತಿ ತಿಂಗಳು ಸಂಬಳ ಪಡೆದು ಸರಕಾರಕ್ಕೆ ಮೋಸ ಮಾಡಿ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ನಲ್ಲಿ ಕರ್ತವ್ಯ ಮಾಡುವ ಓರ್ವ ಭ್ರಷ್ಟ ತಾನಾಗಿಯೇ ರಹಸ್ಯ ಕಾರ್ಯಾಚರಣೆ ವೇಳೆ ಬಾಯಿಬಿಟ್ಟು ಸತ್ಯ ಹೇಳಿದ ಈ ಸ್ಟೋರಿಯಾಗಿದೆ.
ಸರಕಾರದ ನೇಮಕ ಸರಕಾರಿ ಆಸ್ಪತ್ರೆಗೆ, ಸೇವೆ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ: ಬೆಳ್ತಂಗಡಿ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಮೆಷಿನ್ ಇದ್ದು ಇದಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 1 ರವರೆಗೆ ಹಾಗೂ ಅಪರಾಹ್ನ 2 ರಿಂದ ಸಂಜೆ 4:30 ರ ವರೆಗೆ ಕರ್ತವ್ಯ ಮಾಡಲು ಕಳೆದ ಒಂದು ವರ್ಷದಿಂದ ಮಂಗಳೂರಿನಿಂದ ರೇಡಿಯಾಲಜಿಸ್ಟ್ ಅನಿತ್ ರಾಜ್ ಭಟ್ ಅವರನ್ನು ಸರಕಾರ ನೇಮಕ ಮಾಡಲಾಗಿದೆ. ರೇಡಿಯಾಲಜಿಸ್ಟ್ ಅನಿತ್ ರಾಜ್ ಭಟ್ ಮಾತ್ರ ವಾರದ ಎರಡು ದಿನ ನಾಲ್ಕು ಖಾಸಗಿ ಆಸ್ಪತ್ರೆ ಮತ್ತು ಒಂದು ಬೆಳ್ತಂಗಡಿಯ ಖಾಸಗಿ ಕ್ಲಿನಿಕ್ ಗೆ ಕರ್ತವ್ಯಕ್ಕೆ ಹೋಗುತ್ತಾರೆ. ಇಲ್ಲಿ ಸರಕಾರಿ ಕರ್ತವ್ಯಕ್ಕಿಂತ ಖಾಸಗಿ ಕರ್ತವ್ಯ ಹೆಚ್ಚಾಗಿ ನಿರ್ವಹಿಸುತ್ತಿದ್ದಾರೆ ಎಂಬ ಸತ್ಯ ಹೊರಬಂದಿದೆ.
ಕರ್ತವ್ಯದ ನಡುವೆ ಜೂಟ್: ರೇಡಿಯಾಲಜಿಸ್ಟ್ ಅನಿತ್ ರಾಜ್ ಭಟ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಪ್ರತಿ ಮಂಗಳವಾರ ಮತ್ತು ಗುರುವಾರ ಬೆಳಗ್ಗೆ 11 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ 10 ರಿಂದ 15 ಮಂದಿಯ ಸ್ಕ್ಯಾನಿಂಗ್ ಮಾಡಿ 12:30 ಕ್ಕೆ ಬೆಳ್ತಂಗಡಿ ಖಾಸಗಿ ಕ್ಲಿನಿಕ್ ಗೆ ನೇರವಾಗಿ ಓಡುತ್ತಾರೆ. ಬಳಿಕ ಅಲ್ಲಿಂದ ಕಕ್ಕಿಂಜೆ ,ಉಜಿರೆ, ಲಾಯಿಲ , ಬದ್ಯಾರ್ ಆಸ್ಪತ್ರೆಗೆ ಹೋಗಿ ಕೆಲಸ ಮಾಡುತ್ತಾರೆ. ಆಸ್ಪತ್ರೆಯಲ್ಲಿ ಸ್ವತಃ ಅನಿತ್ ರಾಜ್ ಭಟ್ ನಾಲ್ಕು ಖಾಸಗಿ ಆಸ್ಪತ್ರೆಗೆ ಮತ್ತು ಬೆಳ್ತಂಗಡಿ ಖಾಸಗಿ ಸ್ಪಂದನ ಕ್ಲಿನಿಕ್ ಗೆ ಸರಕಾರಿ ಕರ್ತವ್ಯದ ವೇಳೆ ಹೋಗುತ್ತಿರುವುದಾಗಿ ರಹಸ್ಯ ಕಾರ್ಯಾಚರಣೆ ವೇಳೆಯಲ್ಲಿ ಸತ್ಯ ಒಪ್ಪಿಕೊಂಡಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ಹಿಸಲು ಇದೆಯೇ ಹಿರಿಯ ಅಧಿಕಾರಿಗಳ ಅನುಮತಿ?: ರೇಡಿಯಾಲಜಿಸ್ಟ್ ಅನಿತ್ ರಾಜ್ ಭಟ್ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಬದಲಾಗಿ ಖಾಸಗಿ ಆಸ್ಪತ್ರೆಗಳ ಕಡೆ ಹೆಚ್ಚು ಗಮನ ಹರಿಸೋ ವಿಚಾರವನ್ನು ವರದಿಗಾರರು, ಸಾರ್ವಜನಿಕರು ಪ್ರಶ್ನೆ ಮಾಡಿದ್ದಕ್ಕೆ ಸ್ಥಳದಲ್ಲಿಯೇ ಆಸ್ಪತ್ರೆಗಳಿಗೆ ಮತ್ತು ಕ್ಲಿನಿಕ್ ಗೆ ಕರೆ ಮಾಡಿ ಇನ್ನೂ ಮುಂದೆ ಬರುವುದಿಲ್ಲ ಡಿ.ಎಚ್.ಒ ಗೆ ದೂರು ಹೋಗಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ: ಸರಕಾರಿ ಕರ್ತವ್ಯದಲ್ಲಿ ಖಾಸಗಿ ಆಸ್ಪತ್ರೆಗೆ ಹೋಗಿ ಕರ್ತವ್ಯ ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳ ಅನುಮತಿ ಇದೆ ಎಂದು ತಿಳಿಸಿದಾಗ ತಕ್ಷಣ ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿಗೆ ಕರೆ ಮಾಡಿ ಹೋರಾಟಗಾರರೊಬ್ಬರು ಕೇಳಿದಾಗ ಅಂತಹ ಯಾವುದೇ ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ. ಬಳಿಕ ಅನಿತ್ ರಾಜ್ ಭಟ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಅನಿತ್ ರಾಜ್ ಭಟ್ ಸರಿಯಾಗಿ ಕರ್ತವ್ಯ ನಿರ್ವಹಿಸದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಎ.ಎಮ್.ಒ ಡಾ.ರಮೇಶ್ ಮತ್ತು ಬೆಳ್ತಂಗಡಿ ತಾಲೂಕು ಆರೋಗ್ಯಧಿಕಾರಿ ಡಾ.ಸಂಜತ್ ಏನೂ ಮಾಡುತ್ತಿದ್ದಾರೆ ಎಂಬುವುದು ಸಾರ್ವಜನಿಕ ಪ್ರಶ್ನೆಯಾಗಿದೆ. ಈ ರೀತಿ ರಾಜಾರೋಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರೇಡಿಯೋಲಾಜಿಸ್ಟ್ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ
ಸರ್ಕಾರಿ ಅಧಿಕಾರಿಯಿಂದ ಖಾಸಗಿ ದರ್ಬಾರ್: ಸರಕಾರಿ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯದ ಅವಧಿಯಲ್ಲಿ ಖಾಸಗಿ ಒಡೆತನದ ಆಸ್ಪತ್ರೆಗಳು ಮತ್ತು ಬೆಳ್ತಂಗಡಿಯಲ್ಲಿರುವ ಸ್ಪಂದನ ಕ್ಲಿನಿಕ್ ಗಳಿಗೆ ರಹಸ್ಯವಾಗಿ ಭೇಟಿ ನೀಡಿ ತನ್ನ ಕರಾಮತ್ತು ಪ್ರದರ್ಶನ ಮಾಡುವ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಪತ್ರಕರ್ತರು ಅಧಿಕಾರಿಯವರಲ್ಲಿ ವಿಚಾರಿಸಿದಾಗ ಹಲವು ವಿಷಯಗಳು ಹೊರಬಿದ್ದಿದೆ.
ಸೂಪರ್ ಫಾಸ್ಟ್ ರೆಡಿಯೋಲಾಜಿಸ್ಟ್: ದಿನಕ್ಕೆ ನಿರ್ದಿಷ್ಟ ಸಂಖ್ಯೆಯಲ್ಲಿ ಸ್ಕ್ಯಾನಿಂಗ್ ಮಾಡುವ ರೆಡಿಯೋಲಾಜಿಸ್ಟ್ ತಾಲೂಕಿನ ಹಲವು ಆಸ್ಪತ್ರೆಗಳ ಸಹಿತ ಕ್ಲಿನಿಕ್ ಗಳಲ್ಲಿ ಸೇವೆ ನೀಡುವ ಬಗ್ಗೆ ಖುದ್ದು ಒಪ್ಪಿಕೊಂಡ ಆಧಾರದಲ್ಲಿ ಇವರು ಸೂಪರ್ ಫಾಸ್ಟ್ ಬುಲೆಟ್ ಟ್ರೈನ್ ವೇಗದಲ್ಲಿ ಕೆಲಸ ಮಾಡುತ್ತಾರೋ ಎನ್ನುವ ಸಂಶಯವೂ ಕಾಡುತ್ತಿದೆ.
ಟ್ಯಾಕ್ಸ್ ಕಟ್ಟುತ್ತೇನೆ ಅಂತಾರೆ ಈ ಅಧಿಕಾರಿಗಳು: ಅಧಿಕಾರಿಯ ಕರ್ತವ್ಯ ಲೋಪದ ಬಗ್ಗೆ ವಿಚಾರಿಸಿದಾಗ ಹಲವು ಆಸ್ಪತ್ರೆಗಳ ಭೇಟಿ ಮಾಡುವ ತಾವು ದಿನಕ್ಕೆ ಎಷ್ಟು ಆದಾಯ ಗಳಿಸುತ್ತೀರಿ ಎಂಬ ಪ್ರಶ್ನೆಗೆ ತಾನು ಟ್ಯಾಕ್ಸ್ ಪಾವತಿ ಮಾಡುತ್ತೇನೆ ಅಂದುಬಿಟ್ಟರು ಈ ವೈದ್ಯರು ಹಾಗಾದ್ರೆ ಸರ್ಕಾರದ ಕೆಲಸದ ಸಮಯದಲ್ಲಿ ಖಾಸಗಿ ಸೇವೆ ಸಲ್ಲಿಸಿ ಟ್ಯಾಕ್ಸ್ ಕಟ್ಟಿದ್ರೆ ಎಲ್ಲವೂ ಅಧಿಕೃತ ಆಗುವುದೇ ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಗರ್ಭಿಣಿಯರ ಸಂಕಷ್ಟಕ್ಕೆ ಕಾರಣವಾದ ಸ್ಕ್ಯಾನಿಂಗ್ ಸೇವೆ; ಕ್ರಮಕ್ಕೆ ಸಾರ್ವಜನಿಕರ ಆಗ್ರಹ ಇತ್ತೀಚಿನ ದಿನಗಳಲ್ಲಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ಹಲವು ಕಾರಣಗಳಿಂದ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಇದೀಗ ಆಸ್ಪತ್ರೆಯ ಸ್ಕ್ಯಾನಿಂಗ್ ಸೇವೆಯೂ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲು ಸಾರ್ವಜನಿಕರು ಮುಂದಾಗಿದ್ದಾರೆ.
ಹೊಸ ಸ್ಕ್ಯಾನಿಂಗ್ ಯಂತ್ರ ಬಂದರೂ ಸೇವೆಯಲ್ಲಿ ಕೊರತೆ: ಸಾರ್ವಜನಿಕರ ಪ್ರಕಾರ, ಈ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರವು ಸುಮಾರು ಎರಡು ವರ್ಷಗಳ ಕಾಲ ದುರಸ್ತಿಯಾಗದೆ ಬಳಕೆಗೆ ಲಭ್ಯವಿರಲಿಲ್ಲ. ಬಳಿಕ ಉಸ್ತುವಾರಿ ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಈ ಸಮಸ್ಯೆಯನ್ನು ಗಮನಕ್ಕೆ ತಂದಿದ್ದರು. ಅದರ ನಂತರ ರಕ್ಷಾ ಸಮಿತಿ ನಿಧಿಯಿಂದ ಹೊಸ ಸ್ಕ್ಯಾನಿಂಗ್ ಯಂತ್ರ ಖರೀದಿಸಲು ಸೂಚನೆ ನೀಡಲಾಗಿತ್ತು. ಇತ್ತೀಚೆಗೆ ಹೊಸ ಯಂತ್ರ ಅಳವಡಿಕೆಯಾಗಿದ್ದರೂ, ಅದರ ಸಂಪೂರ್ಣ ಪ್ರಯೋಜನ ರೋಗಿಗಳಿಗೆ ದೊರೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ರೇಡಿಯೋಲಾಜಿಸ್ಟ್ ವಿರುದ್ಧ ಧ್ವನಿ ಎತ್ತುವವರ್ಯಾರು: ಪ್ರಸ್ತುತ ಆಸ್ಪತ್ರೆಯಲ್ಲಿ ಇಬ್ಬರು ಸ್ತ್ರೀರೋಗ ತಜ್ಞರು ಸೇವೆ ಸಲ್ಲಿಸುತ್ತಿದ್ದು, ಗರ್ಭಿಣಿಯರಿಗೆ ಅಗತ್ಯವಿರುವ ಸ್ಕ್ಯಾನಿಂಗ್ ಸೇವೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎನ್ನಲಾಗಿದೆ. ವಾರದಲ್ಲಿ ಮಂಗಳವಾರ ಹಾಗೂ ಗುರುವಾರ ಮಾತ್ರ ಮಂಗಳೂರಿನಿಂದ ರೇಡಿಯಾಲಜಿಸ್ಟ್ ಅವರನ್ನು ನಿಯೋಜಿಸಲಾಗಿದ್ದು, ಅವರು ನಿಗದಿತ ವೇಳೆಯನ್ನು ಸಂಪೂರ್ಣವಾಗಿ ಪಾಲಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೆಲವೊಮ್ಮೆ ವಾರದಲ್ಲಿ ಒಂದು ದಿನ ಮಾತ್ರ ಆಗಮಿಸುತ್ತಾರೆ. ಆಸ್ಪತ್ರೆಗೆ ಸುಮಾರು ಬೆಳಿಗ್ಗೆ 11 ಗಂಟೆಗೆ ಬಂದು ಮಧ್ಯಾಹ್ನ 12.30ರ ವೇಳೆಗೆ ತೆರಳುವುದರಿಂದ ದೂರದ ಊರುಗಳಿಂದ ಬರುವ ಗರ್ಭಿಣಿಯರು ಹಾಗೂ ಇತರ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಲಾಗಿದೆ.ಇದೇ ವೇಳೆ, ಸರ್ಕಾರಿ ಕರ್ತವ್ಯದ ಅವಧಿಯಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸೇವೆ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.ಈ ಹಿನ್ನೆಲೆಯಲ್ಲಿ ವಾರದಲ್ಲಿ ಕನಿಷ್ಠ ಮೂರು ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ನಿಯಮಿತ ಸ್ಕ್ಯಾನಿಂಗ್ ಸೇವೆ ಕಲ್ಪಿಸುವಂತೆ ಸಾರ್ವಜನಿಕರು ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಜೊತೆಗೆ, ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಿ ಬಡ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅವ್ಯವಸ್ಥೆಯನ್ನು ಸರಿಪಡಿಸಲು ಅಗ್ರಹ: ಬೆಳ್ತಂಗಡಿ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಕರ್ಮಕಾಂಡವನ್ನು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಧಿಕಾರಿ ಡಾ.ತಿಮ್ಮಯ್ಯ ಅವರು ಇನ್ನಾದರೂ ಸರಿಪಡಿಸಿ ಸರಿಯಾಗಿ ಬಡ ರೋಗಿಗಳ ಸೇವೆಯನ್ನು ಮಾಡಲು ಮುಂದಾಗಬೇಕಾಗಿದೆ ಎಂಬುವುದು ಬಡ ಸಾರ್ವಜನಿಕರ ಆಗ್ರಹವಾಗಿದೆ.


