Saturday, June 27, 2026
Homeಕರಾವಳಿಮಂಗಳೂರುಮಂಗಳೂರು: ಕೈ ಕೋಳ ಸಮೇತ ಐವರು ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಖತರ್ನಾಕ್ ಸರಗಳ್ಳ

ಮಂಗಳೂರು: ಕೈ ಕೋಳ ಸಮೇತ ಐವರು ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಖತರ್ನಾಕ್ ಸರಗಳ್ಳ

- Advertisement -
- Advertisement -

ಮಂಗಳೂರು: ಬಂಧಿಸಿ ಠಾಣೆಗೆ ಕರೆತರುತ್ತಿದ್ದ ವೇಳೆ ಐವರು ಪೊಲೀಸರ ಕಣ್ಣಿಗೆ ಮಣ್ಣೆರಚಿ, ಹ್ಯಾಂಡ್‌ಕಫ್ (ಕೋಳ) ಸಮೇತ ಖತರ್ನಾಕ್ ಸರಗಳ್ಳನೊಬ್ಬ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡಿರುವ ಘಟನೆ ಮಂಗಳೂರಿನ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಅಲ್ತಾಫ್ ಹುಸೇನ್ ಪರಾರಿಯಾದ ನಟೋರಿಯಸ್ ಆರೋಪಿ. ಈತನ ಬಂಧನಕ್ಕಾಗಿ ಪೊಲೀಸರು ಇದೀಗ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.

ಮಂಗಳೂರಿನ ಜಪ್ಪಿನಮೊಗರು ಬಳಿ ಇತ್ತೀಚೆಗೆ ನಡೆದಿದ್ದ ಸರಗಳ್ಳತನ ಪ್ರಕರಣದ ಬೆನ್ನುಹತ್ತಿದ್ದ ಮಂಗಳೂರಿನ ಪಾಂಡೇಶ್ವರ ಠಾಣೆಯ ಪೊಲೀಸರಿಗೆ ಅಂತರರಾಜ್ಯ ಕಳ್ಳರ ಗ್ಯಾಂಗ್‌ನ ಪಕ್ಕಾ ಮಾಹಿತಿ ಲಭ್ಯವಾಗಿತ್ತು. ಬಾಗಲಕೋಟೆಯ ಅಲ್ತಾಫ್ ಹುಸೇನ್, ಉತ್ತರ ಪ್ರದೇಶ ಮೂಲದ ಮಹಮ್ಮದ್ ಸಿದ್ದಿಕ್ ಹಾಗೂ ರವಿ ಬೌರ ಎಂಬಿಬ್ಬರು ಸಹಚರರೊಂದಿಗೆ ಸೇರಿಕೊಂಡು ವಾಹನ ಕಳ್ಳತನ, ಸರಗಳ್ಳತನ ಹಾಗೂ ದರೋಡೆ ಎಸಗುತ್ತಿದ್ದ ಗ್ಯಾಂಗ್ ಕಟ್ಟಿಕೊಂಡಿದ್ದ. ಕೃತ್ಯ ಎಸಗಿದ ತಕ್ಷಣ ಈ ಗ್ಯಾಂಗ್ ನಗರ ಬಿಟ್ಟು ಪರಾರಿಯಾಗುತ್ತಿತ್ತು. ಹೈದರಾಬಾದ್, ಬಾಗಲಕೋಟೆ, ಗದಗ್ ಸೇರಿದಂತೆ ಹಲವು ನಗರಗಳಲ್ಲಿ ಈ ಗ್ಯಾಂಗ್ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿವೆ.

ಖತರ್ನಾಕ್ ಗ್ಯಾಂಗ್ ಮಂಗಳೂರಿನ ಮೀನುಗಾರಿಕಾ ದಕ್ಕೆಗೆ ಬಂದಿರುವ ಖಚಿತ ಮಾಹಿತಿ ಪಡೆದ ಪಾಂಡೇಶ್ವರ ಠಾಣೆಯ ಐವರು ಸಿಬ್ಬಂದಿಗಳ ತಂಡ ದಾಳಿ ನಡೆಸಿ ಮೂವರನ್ನೂ ಬಂಧಿಸಿತ್ತು. ಆದರೆ, ಆರೋಪಿಗಳನ್ನು ಹ್ಯಾಂಡ್‌ಕಫ್ ಹಾಕಿ ಠಾಣೆಗೆ ಕರೆತರುತ್ತಿದ್ದಾಗ ರೋಜಾರಿಯೋ ಚರ್ಚ್ ರಸ್ತೆಯ ಬಳಿ ಅಲ್ತಾಫ್ ಹುಸೇನ್ ಪೊಲೀಸರನ್ನು ಜೋರಾಗಿ ತಳ್ಳಿ, ಕೈಗೆ ಹಾಕಿದ್ದ ಕೋಳದೊಂದಿಗೇ ಓಟ ಕಿತ್ತಿದ್ದಾನೆ. ಇದೇ ವೇಳೆ ಉಳಿದಿಬ್ಬರು ಸಹಚರರಾದ ಮಹಮ್ಮದ್ ಸಿದ್ದಿಕ್ ಮತ್ತು ರವಿ ಬೌರ ಕೂಡ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ, ಪೊಲೀಸರು ಹರಸಾಹಸ ಪಟ್ಟು ಅವರಿಬ್ಬರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ತಾಫ್ ಹುಸೇನ್ ಕೈಕೋಳದ ಸಮೇತ ಸಾರ್ವಜನಿಕ ರಸ್ತೆಯಲ್ಲಿ ಓಡುತ್ತಿರುವ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸದ್ಯ ತಲೆಮರೆಸಿಕೊಂಡಿರುವ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪೊಲೀಸ್ ಪ್ರಕಟಣೆ: ಪರಾರಿಯಾಗಿರುವ ಆರೋಪಿ ಅಲ್ತಾಫ್ ಹುಸೇನ್ ಕುರಿತು ಸಾರ್ವಜನಿಕರಿಗೆ ಯಾವುದೇ ಸುಳಿವು ಸಿಕ್ಕಲ್ಲಿ ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ, ತನಿಖೆಗೆ ಸಹಕರಿಸಬೇಕಾಗಿ ಮಂಗಳೂರು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!