
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಅಡ್ಡಮತದಾನದ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ರಾಜ್ಯಸಭಾ ಅಥವಾ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನದ (Cross Vote) ಸತ್ಯಾಸತ್ಯತೆ ತಿಳಿಯಲು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಶಾಸಕರಿಂದ ಆಣೆ-ಪ್ರಮಾಣ ಮಾಡಿಸಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಧರ್ಮಸ್ಥಳದಲ್ಲಿ ಇಂತಹ ರಾಜಕೀಯ ಸಭೆ ಹಾಗೂ ಆಣೆ-ಪ್ರಮಾಣದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಪಕ್ಷದಲ್ಲಿಯೇ ಭಾರೀ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಆ ನಿರ್ಧಾರವನ್ನು ಕೈ ಬಿಡಲಾಗಿತ್ತು. ಅಲ್ಲದೇ ಈ ಗೊಂದಲಕ್ಕೆ ವಿಜಯೇಂದ್ರ ಅವರೇ ಕಾರಣ ಎಂದು ಆರೋಪ ಕೇಳಿ ಬಂದಿತ್ತು. ಇದರಿಂದ ತೀವ್ರ ಬೇಸರಗೊಂಡಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ ಒಬ್ಬರೇ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ದೆಹಲಿ ಪ್ರವಾಸದಲ್ಲಿರುವ ವಿಜಯೇಂದ್ರ ಅವರು ಇಂದು ರಾತ್ರಿಯೇ ನೇರವಾಗಿ ಧರ್ಮಸ್ಥಳಕ್ಕೆ ಬರಲಿದ್ದಾರೆ. ನಾಳೆ ಬೆಳಗ್ಗೆ 7 ರಿಂದ 8 ಗಂಟೆಯ ಅವಧಿಯಲ್ಲಿ ಅವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.


