ಮಂಗಳೂರು : ಚಲಿಸುತ್ತಿದ್ದ ಖಾಸಗಿ ಬಸ್ ಚಾಲಕನಿಗೆ ದಿಢೀರ್ ಬಿಪಿ ಲೋ ಆಗಿ ಡ್ರೈವರ್ ಸ್ಟೇರಿಂಗ್ ಮೇಲೆಯೇ ಕುಸಿದುಬಿದ್ದ ಪರಿಣಾಮ, ಬಸ್ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯ ಮುಂಭಾಗ ಮಂಗಳವಾರ ಬೆಳಿಗ್ಗೆ ನಡೆದಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಯಾವುದೇ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಡಿಪುವಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಸರ್ವಿಸ್ ಬಸ್ ಬೆಳಿಗ್ಗೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಮುಂಭಾಗಕ್ಕೆ ತಲುಪಿದಾಗ ಈ ಘಟನೆ ಸಂಭವಿಸಿದೆ.
ಬಸ್ ಚಾಲಕ ಜನಾರ್ಧನ್ ಅವರಿಗೆ ಬಸ್ ಚಲಾಯಿಸುತ್ತಿದ್ದಾಗಲೇ ಇದ್ದಕ್ಕಿದ್ದಂತೆ ತೀವ್ರ ನಿಶ್ಯಕ್ತಿ ಹಾಗೂ ಬಿಪಿ ಲೋ ಆಗಿದೆ. ಪರಿಣಾಮ ಅವರು ಸ್ಟೇರಿಂಗ್ ಮೇಲೆಯೇ ಪ್ರಜ್ಞೆ ತಪ್ಪಿದಂತೆ ಕುಸಿದಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯ ಮಧ್ಯದಲ್ಲಿದ್ದ ಡಿವೈಡರ್ ಮೇಲೆ ನುಗ್ಗಿ ನಿಂತಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದ ಬೆನ್ನಲ್ಲೇ ಬಿಪಿ ಲೋ ಆಗಿ ಗಂಭೀರ ಸ್ಥಿತಿಯಲ್ಲಿದ್ದ ಚಾಲಕ ಜನಾರ್ಧನ ಅವರನ್ನು ಸ್ಥಳೀಯರು ಹಾಗೂ ಬಸ್ ಸಿಬ್ಬಂದಿ ತಕ್ಷಣವೇ ಎದುರಿಗೇ ಇದ್ದ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೂಕ್ತ ಚಿಕಿತ್ಸೆಯ ಬಳಿಕ ಚಾಲಕ ಪ್ರಸ್ತುತ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ, ವಾಹನ ತೆರವುಗೊಳಿಸಿ ಪರಿಶೀಲನೆ ನಡೆಸಿದ್ದಾರೆ.


