ಬೆಂಗಳೂರು : ಸ್ಯಾಂಡಲ್‌ವುಡ್‌ನ ಟೈಗರ್, ನಟ ವಿನೋದ್ ಪ್ರಭಾಕರ್ ಅಭಿಮಾನಿಗಳಿಗೆ ಸದ್ಯ ಆತಂಕದ ಸುದ್ದಿಯೊಂದು ಹೊರಬಿದ್ದಿದೆ. ಹೌದು, ನಟ ವಿನೋದ್ ಪ್ರಭಾಕರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ನಾಗರಭಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ಇಂದು ಮುಂಜಾನೆ ನಟ ವಿನೋದ್ ಪ್ರಭಾಕರ್ ಅವರಿಗೆ ದಿಢೀರನೆ ರಕ್ತದೊತ್ತಡ (BP) ಏರುಪೇರಾಗಿದೆ. ಮನೆಯಲ್ಲಿದ್ದಾಗಲೇ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಾಣಿಸಿಕೊಂಡ ತಕ್ಷಣವೇ ಅವರನ್ನು ಕುಟುಂಬಸ್ಥರು ನಾಗರಭಾವಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ವಿನೋದ್ ಪ್ರಭಾಕರ್ ಅವರು ತಮ್ಮ ಮುಂಬರುವ ಬಹುನಿರೀಕ್ಷಿತ ‘ಬಲರಾಮ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಅತ್ಯಂತ ಬ್ಯುಸಿಯಾಗಿದ್ದರು. ಸತತ ಶೂಟಿಂಗ್, ಓಡಾಟ ಹಾಗೂ ಒತ್ತಡದಿಂದಾಗಿ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಇಂದು ಬೆಳಗ್ಗೆಯಿಂದಲೇ ಆಸ್ಪತ್ರೆಯ ಕಾರ್ಡಿಯಾ ಕೇರ್ (ICU – ತೀವ್ರ ನಿಗಾ ಘಟಕ) ನಲ್ಲಿ ನಟನಿಗೆ ವೈದ್ಯರ ತಂಡ ಪ್ರತ್ಯೇಕವಾಗಿ ಚಿಕಿತ್ಸೆ ನೀಡುತ್ತಿದೆ. ವೈದ್ಯರು ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇಟ್ಟಿದ್ದು, ಸದ್ಯಕ್ಕೆ ಚಿಕಿತ್ಸೆ ಮುಂದುವರಿದಿದೆ.


