ನವದೆಹಲಿ: ನಾಳೆ ದೇಶಾದ್ಯಂತ ನೀಟ್ ಮರು ಪರೀಕ್ಷೆ ನಡೆಯಲಿದೆ. ನಾಳೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:15 ಗಂಟೆಯವರೆಗೆ ಪರೀಕ್ಷಾ ಸಮಯ ನಿಗದಿಯಾಗಿದೆ.ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30 ಗಂಟೆಯವರೆಗೆ ಮಾತ್ರ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಾವಕಾಶವಿದ್ದು, 1:30 ಗಂಟೆಯ ನಂತರ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪ್ರವೇಶ ನಿರಾಕರಿಸಲಾಗುತ್ತದೆ.
ವಿಕಲಚೇತನ ವಿದ್ಯಾರ್ಥಿಗಳಿಗೆ ಸಂಜೆ 6:20 ಗಂಟೆಯವರೆಗೆ ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯಾವಕಾಶ ಕಲ್ಪಿಸಲಾಗಿದ್ದು, 22.7 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷೆಯ ಸುಗಮ ನಿರ್ವಹಣೆಗಾಗಿ ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಸಿಸಿಟಿವಿ, ಜಿಪಿಎಸ್ ಟ್ರ್ಯಾಕಿಂಗ್ ಹಾಗೂ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ. ಒಂದು ವೇಳೆ ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ದೋಷವಿದ್ದಲ್ಲಿ ಮ್ಯಾನುವಲ್ ಪರಿಶೀಲನೆಗೆ ಎನ್‌ಟಿಎ ಅವಕಾಶ ನೀಡಿದೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ನೆರವಿಗಾಗಿ ಎನ್ ಟಿಎ 011-40759000 ಸಹಾಯವಾಣಿಯನ್ನೂ ಆರಂಭಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ಯಾರಾ ಮಿಲಿಟರಿ ನಿಯೋಜನೆ ಮಾಡಲಾಗಿದ್ದು, ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಬಸ್ ಹಾಗೂ ರೈಲು ಪ್ರಯಾಣ ದರಗಳನ್ನೂ ಕಡಿತ ಮಾಡಲಾಗಿದೆ.


