ಬಂಟ್ವಾಳ:ಗೃಹ ಪ್ರವೇಶದ ಔತಣಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗಲೇ ಮನೆಯ ಯಜಮಾನ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಆಲಾಡಿ-ಕೊಪ್ಪಳ ಎಂಬಲ್ಲಿ ನಡೆದಿದೆ.
ಅಮೀರ್ ಅರ್ಶದಿ ಅವರು ಏ.17 ರಂದು ಸಜಿಪಮುನ್ನೂರು ಗ್ರಾಮದ ಆಲಂಪಾಡಿ-ಕೊಪ್ಪಳ ಎಂಬಲ್ಲಿ ನೂತನ ಮನೆ ನಿರ್ಮಾಣ ಮಾಡಿದ್ದು, ಇದರ ಔಪಚಾರಿಕ ಗೃಹ ಪ್ರವೇಶ ಪ್ರಕ್ರಿಯೆ ನಡೆಸಿದ್ದರು. ಏ.27 ರಂದು ಮಧ್ಯಾಹ್ನ ಬಂಧು ಮಿತ್ರರಿಗೆ ಔತಣಕೂಟ ಏರ್ಪಡಿಸಿದ್ದರು. ಔತಣಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗಲೇ ಮನೆ ಯಜಮಾನ ಅಮೀರ್ ಅರ್ಶದಿ ಅವರಿಗೆ ಮಧ್ಯರಾತ್ರಿ ಹಠಾತ್ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ಬಿ.ಸಿ.ರೋಡ್ ಪರ್ಲಿಯಾದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಔತಣಕೂಟಕ್ಕಾಗಿ ಭಾನುವಾರ ರಾತ್ರಿವರೆಗೂ ಬಂಧು ಮಿತ್ರಿಗೆ ಕರೆ ಮಾಡಿ ಆಹ್ವಾನ ನೀಡಲಾಗಿತ್ತು. ಅಮೀರ್ ಅರ್ಶದಿ ಅವರ ಹಠಾತ್ ನಿಧನ ಅವರ ಕುಟುಂಬದವರಿಗೆ ದೊಡ್ಡ ಆಘಾತ ನೀಡಿದೆ.


