ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಡಗರದಿಂದ ನಡೆಯಬೇಕಿದ್ದ ಮದುವೆಯೊಂದು ಸಿನಿಮೀಯ ಮಾದರಿಯಲ್ಲಿ ರದ್ದಾಗಿದೆ. ನಿಶ್ಚಯವಾಗಿದ್ದ ಮದುವೆಗೆ ಕೆಲವೇ ಗಂಟೆಗಳ ಮೊದಲು ವಧು ತನ್ನ ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದು, ಇಡೀ ಪಟ್ಟಣದಲ್ಲಿ ಈ ವಿಷಯ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಶಿರಸಿಯ ಮುಸ್ಲಿಂ ಗಲ್ಲಿಯ ನಿವಾಸಿಯಾದ ಸಿಫಾ (25) ಎಂಬಾಕೆಗೆ ಪೋಷಕರು ಅಬ್ರಾರ್ ಎಂಬ ಯುವಕನೊಂದಿಗೆ ವಿವಾಹ ನಿಶ್ಚಯಿಸಿದ್ದರು. ಇಂದು ಬೆಳಗ್ಗೆ ನಗರದ ಉಸುರಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಬೆಳ್ಳಂಬೆಳಿಗ್ಗೆ ಸಿಫಾ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.
ಮದುವೆ ಸಮಾರಂಭಕ್ಕಾಗಿ ಮಟನ್ ಹಾಗೂ ಚಿಕನ್ ಸೇರಿದಂತೆ ಕ್ವಿಂಟಲ್‌ಗಟ್ಟಲೆ ಮಾಂಸಾಹಾರದ ಅಡುಗೆ ಸಿದ್ಧಪಡಿಸಲಾಗಿತ್ತು.ಇದೀಗ ಎರಡೂ ಕುಟುಂಬದವರಿಗೆ ತೀವ್ರ ಮುಜುಗರ ಹಾಗೂ ಆಘಾತವುಂಟಾಗಿದೆ.
ಮಗಳ ನಾಪತ್ತೆಯ ಕುರಿತು ತಂದೆ ಝಹೀರ್ ಖಾನ್ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪ್ರಿಯಕರನೊಂದಿಗೆ ಹೋಗಿರುವ ಯುವತಿಯ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.


