
ವಿಟ್ಲ; ಕೋಳಿ ಅಂಕದ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ವಿಟ್ಲಕಸಬ ನಿವಾಸಿಗಳಾದ ಚಂದ್ರಶೇಖರ (43), ಇಬ್ರಾಹಿಂ (65) ಹಾಗೂ ಹೊನ್ನಪ್ಪ (46) ಮತ್ತು ವಿಟ್ಲಪಡ್ನೂರು ನಿವಾಸಿ ಚಂದ್ರಹಾಸ (32) ಬಂಧಿತರು.
ದಿನಾಂಕ:12-04-2026 ರಂದು ಸಂಜೆ ಬಂಟ್ವಾಳ ವಿಟ್ಲಕಸಬ ಗ್ರಾಮದ ಮಾಡ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ರವರಿಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸುಮಾರು 20 ರಿಂದ 25 ಜನ ಗುಂಪು ಸೇರಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದ ಜೂಟಾಟ ಆಡುತ್ತಿರುವುದು ಕಂಡುಬಂದಿರುತ್ತದೆ.
ಎಸ್ ಐ ರಾಮಕೃಷ್ಣ ಮತ್ತು ಸಿಬ್ಬಂದಿ ಜೂಜಾಟದಲ್ಲಿ ತೊಡಗಿಕೊಂಡಿದ್ದವರನ್ನು ಹಿಡಿಯಲು ಹೋದಾಗ ಕೆಲವರು ಓಡಿ ಹೋಗಿದ್ದು, ಆ ಪೈಕಿ ನಾಲ್ವರನ್ನು ಹಿಡಿಯಲಾಗಿರುತ್ತದೆ. ಉಳಿದವರನ್ನು ಹಿಡಿಯಲು ಸಿಬ್ಬಂದಿ ಪ್ರಯತ್ನಿಸಿದಾಗ ಆರೋಪಿಗಳಾದ ಬಾಬಣ್ಣ ಮತ್ತು ಹೊನ್ನಪ್ಪ ಹರಿಜನ ಎಂಬವರುಗಳು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿ ಪರಾರಿಯಾಗಿರುತ್ತಾರೆ. ಮುಂದಿನ ಕಾನೂನುಕ್ರಮಕ್ಕಾಗಿ ಜೂಜಾಟಕ್ಕೆ ಉಪಯೋಗಿಸಿದ 03 ಕೋಳಿಗಳು ಹಾಗೂ ನಗದು 1000/- ರೂ ಹಾಗೂ ಇತರೆ ಸೊತ್ತುಗಳನ್ನು ಸ್ವಾಧೀನಪಡಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 90/2026, ಕಲಂ: 87, 93 ಕರ್ನಾಟಕ ಪೊಲೀಸ್ ಕಾಯ್ದೆ, ಕಲಂ: 3, 11 ಪ್ರಾಣಿ ಹಿಂಸೆ ತಡೆ ಕಾಯ್ದೆ, ಕಲಂ: 112, 221 BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.


