ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮರಳಿ ತೆರೆಯಲು ವಿಧಿಸಿದ್ದ ಗಡುವನ್ನು ಮತ್ತೆ 24 ಗಂಟೆಗಳ ಕಾಲ ವಿಸ್ತರಿಸಿದ್ದಾರೆ.
ಒಂದು ವೇಳೆ ಈ ಗಡುವಿನೊಳಗೆ ಜಲಸಂಧಿ ಮುಕ್ತವಾಗದಿದ್ದರೆ, ಇರಾನ್ ನ ಪ್ರಮುಖ ನೆಲೆಗಳ ಮೇಲೆ ಭೀಕರ ದಾಳಿ ನಡೆಸುವುದಾಗಿ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಇನ್ನು ಅವರು ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ರುಥ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು ‘ ಇರಾನ್ ತನ್ನ ನಿರ್ಬಂಧಗಳನ್ನು ಮಂಗಳವಾರ ರಾತ್ರಿ 8 ಗಂಟೆಯ ಒಳಗೆ ತೆರವುಗೊಳಿಸಿ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಬೇಕು ಇಲ್ಲವಾದಲ್ಲಿ ಮಂಗಳವಾರ ಇರಾನ್ ಪಾಲಿಗೆ ‘ಪವರ್ ಪ್ಲಾಂಟ್ ಡೇ’ ಮತ್ತು ‘ಬ್ರಿಡ್ಜ್ ಡೇ’ ಆಗಲಿದೆ” ಎಂದು ಹೇಳುವ ಮೂಲಕ ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳ ಮೇಲೆ ಗುರಿ ಇಟ್ಟಿರುವುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಟ್ರಂಪ್ ಈ ಮೊದಲು ಐದು ದಿನಗಳ ಗಡುವು ನೀಡಿದ್ದರು, ನಂತರ ಅದನ್ನು ಹತ್ತು ದಿನಗಳಿಗೆ ವಿಸ್ತರಿಸಿ ಸೋಮವಾರದ ವರೆಗೆ ಗಡುವು ನೀಡಿದ್ದರು ಆದರೆ ಈಗ ಮತ್ತೆ 24 ಗಂಟೆಗಳ ಸಮಯ ನೀಡುವ ಮೂಲಕ ಇರಾನ್ ಮೇಲೆ ಒತ್ತಡ ಹೇರುತ್ತಿದ್ದಾರೆ.
ಇನ್ನು ಇರಾನ್ ಟ್ರಂಪ್ ಅವರ ಈ ಎಚ್ಚರಿಕೆಯನ್ನು ತಳ್ಳಿಹಾಕಿದ್ದು, ಅಮೆರಿಕದ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದೆ. ಅಲ್ಲದೆ, ಟ್ರಂಪ್ ಅವರ ಹೇಳಿಕೆಯನ್ನು ಮೂರ್ಖತನದ ಪರಮಾವಧಿ” ಎಂದು ಇರಾನ್ ಸೇನಾ ಕಮಾಂಡ್ ಟೀಕಿಸಿದೆ ಎಂದು ವರದಿಯಾಗಿದೆ.


