ಕರ್ನಾಟಕದ ನೆಚ್ಚಿನ ತಂಡ ಐಪಿಎಲ್ 2025ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಬರೋಬ್ಬರಿ $1.78 ಬಿಲಿಯನ್ (₹16,600 ಕೋಟಿ) ಮೊತ್ತಕ್ಕೆ ಮಾರಾಟವಾಗಿ ಹೊಸ ದಾಖಲೆ ಬರೆದಿದೆ.
ಈ ತಂಡವನ್ನು ಡಿಯಾಜಿಯೊದಿಂದ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಹಾಗೂ ಅಮೆರಿಕದ ಬ್ಲ್ಯಾಕ್‌ಸ್ಟೋನ್ ಒಳಗೊಂಡ ಹೂಡಿಕೆದಾರರ ಒಕ್ಕೂಟವು ಜಂಟಿಯಾಗಿ ಖರೀದಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿಯೇ ಅತಿ ದೊಡ್ಡ ಮಾರಾಟವಾಗಿದೆ.
ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ಈ ಹೊಸ ಮಾಲೀಕತ್ವದ ಅಡಿಯಲ್ಲಿ ತಂಡದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇನ್ನು ಈ ಹೊಸ ಮಾಲೀಕತ್ವವು ಐಪಿಎಲ್ 2026ರ ಸೀಸನ್ ಮುಗಿದ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಡಿಯಾಜಿಯೊ ಸಂಸ್ಥೆಯೇ ತಂಡದ ಜವಾಬ್ದಾರಿಯನ್ನು ಮುಂದುವರಿಸಲಿದೆ.
ಈ ಒಪ್ಪಂದವು ಕೇವಲ ಪುರುಷರ ತಂಡಕ್ಕೆ ಸೀಮಿತವಾಗಿಲ್ಲ, ಆರ್‌ಸಿಬಿ ಮಹಿಳಾ ತಂಡವನ್ನೂ (WPL) ಇದೇ ಒಕ್ಕೂಟವು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.


