ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಕ್ಕೆ ಅಪನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾಮಂಡಿ ಬೆಟ್ಟಕ್ಕೆ ಬಂದು ಕ್ಷಮೆಯಾಚಿಸಲು ಬಾಲಿವುಡ್ ನಟ ರಣ್ವೀರ್ ಸಿಂಗ್ ಒಪ್ಪಿಕೊಂಡಿದ್ದಾರೆ.
ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಕಾಂತಾರ’ ಚಿತ್ರದ ಚಾಮುಂಡಿ ದೈವದ ದೃಶ್ಯವನ್ನು ನಟ ರಣವೀರ್ ಸಿಂಗ್ ಅಪಹಾಸ್ಯ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ದೈವವನ್ನು ‘ಹೆಣ್ಣು ದೆವ್ವ’ ಎಂದು ಕರೆದು ಅನುಕರಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರಶಾಂತ್ ಮೆತಾಲ್ ಎಂಬವರು ರಣ್ವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದರು. ಈ ಎಫ್ ಐ ಆರ್ ರದ್ದುಗೊಳಿಸುವಂತೆ ಕೋರಿ ರಣ್ವೀರ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ರಣ್ವೀರ್ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದರು.
ಆದರೆ ದೂರುದಾರ ವಕೀಲರು ಕೇವಲ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ರೆ ಸಾಲದು ಎಂದಿದ್ದಾರೆ.ಇದಕ್ಕೆ ರಣ್ವೀರ್ ಪರ ವಕೀಲರು ಕೋರ್ಟ್ ಗೆ ಕ್ಷಮೆಯಾಚನೆಯ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅದಕ್ಕೆ ದೂರುದಾರ ವಕೀಲರು ಪೇಪರ್ ನಲ್ಲಿ ಬರೆದು ಕ್ಷಮೆ ಕೇಳಿದ್ರೆ ಅದು ಪಶ್ಚಾತಾಪ ಇರಬೇಕು. ಅದಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಬಂದು ಕ್ಷಮೆ ಕೇಳಬೇಕು ಎಂದಿದ್ದಾರೆ.ಅದಕ್ಕೆ ರಣ್ವೀರ್ ಪರ ವಕೀಲರು ಒಪ್ಪಿಕೊಂಡಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಲಾಗಿದೆ. ಅಂದೇ ಅಂತಿಮ ತೀರ್ಪು ಬರೋ ಸಾಧ್ಯತೆಯಿದೆ..


